ಅನರ್ಹ ಪಡಿತರ ಚೀಟಿ ಹಿಂದಿರುಗಿಸಲು ಎಪ್ರಿಲ್‌ವರೆಗೆ ಅವಕಾಶ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಮಾ.6: ಅಕ್ರಮವಾಗಿ, ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಸರಕಾರಕ್ಕೆ ಹಿಂದಿರುಗಿಸಲು ಸರಕಾರವು ಎಪ್ರಿಲ್ ಅಂತ್ಯದವರೆಗೆ ಮತ್ತೊಂದು ಅವಕಾಶವನ್ನು ನೀಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅನರ್ಹರು ನಿಗದಿತ ದಿನಾಂಕದೊಳಗೆ ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ತಾಲೂಕು ಕಛೇರಿಯಲ್ಲಿರುವ ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರುಗಳನ್ನು ಸಂಪರ್ಕಿಸಿ ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಎಪಿಎಲ್ ವರ್ಗಕ್ಕಾಗಲಿ ಅಥವಾ ರದ್ದು ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ತಾವೇ ಸ್ವತ: ಪಡಿತರ ಚೀಟಿಗಳನ್ನು ಹಿಂದಿರುಗಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಸ್ಪಷ್ಟಡಿಸಿದ್ದಾರೆ.
ಅವಧಿ ಮುಗಿದ ನಂತರ ಇಲಾಖೆಯೇ ಕಾರ್ಯಾಚರಣೆ ನಡೆಸಿ ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದಾಗ, ಅಂತಹ ಕುಟುಂಬಗಳು ತಾವು ಪಡಿತರ ಚೀಟಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ ದಿನಾಂಕದವರೆಗೆ ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆ.ಜಿ.ಗೆ ಮುಕ್ತ ಮಾರುಕಟ್ಟೆಯ ಬೆಲೆಯ ಅನುಸಾರ ಹಣವನ್ನು ದಂಡವನ್ನಾಗಿ ವಸೂಲಿ ಮಾಡಲಾಗುವುದು. ಇದರೊಂದಿಗೆ ‘ದಿ ಕರ್ನಾಟಕ ಪ್ರಿವೆನ್ಷನ್ ಆಪ್ ಅನ್ ಅಥರೈಜ್ಡ್ ಪೊಸಿಷನ್ ಆಪ್ ರೇಷನ್ ಕಾರ್ಡ್ ಆರ್ಡರ್-1977’ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸ ಲಾಗುವುದು.
ಆದ್ದರಿಂದ ಅನರ್ಹರು ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ತಕ್ಷಣವೇ ಸರಕಾರಕ್ಕೆ ವಾಪಾಸು ನೀಡಿ ಕಾನೂನು ಕ್ರಮದಿಂದ ಮುಕ್ತಿ ಪಡೆಯುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







