ಸಿಎಎ ವಿರೋಧಿ ಹೋರಾಟಗಾರರ ಫೋಟೊಗಳಿರುವ ಬ್ಯಾನರ್ ಗಳನ್ನು ಅಳವಡಿಸಿದ ಆದಿತ್ಯನಾಥ್ ಸರಕಾರ
ಸಾರ್ವಜನಿಕ ಸೊತ್ತುಗಳಿಗೆ ಹಾನಿ ಆರೋಪ

ಲಕ್ನೋ, ಮಾ. 6: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಉಂಟು ಮಾಡಿರುವುದಾಗಿ ಆರೋಪಿಸಿ ಪರಿಹಾರ ನೀಡುವಂತೆ ಹಲವರ ಆರೋಪಿಗಳ ಭಾವಚಿತ್ರಗಳನ್ನು ಒಳಗೊಂಡ ಬ್ಯಾನರ್‌ಗಳನ್ನು ಸ್ಥಳೀಯಾಡಳಿತ ರಸ್ತೆ ಬದಿಗಳಲ್ಲಿ ಅಳವಡಿಸಿದೆ. ಈ ನಡೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಲಕ್ನೋದ ಪ್ರಮುಖ ರಸ್ತೆಗಳ ಕ್ರಾಸಿಂಗ್‌ಗಳಲ್ಲಿ ಭಾವಚಿತ್ರಗಳನ್ನು ಒಳಗೊಂಡ ಬ್ಯಾನರ್‌ಗಳನ್ನು ಗುರುವಾರ ರಾತ್ರಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಡಿಸೆಂಬರ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ದಾಂಧಲೆ ನಡೆಸಿದ ಆರೋಪದಲ್ಲಿ ಹಲವರ ಭಾವಚಿತ್ರ ಹಾಗೂ ವಿಳಾಸವನ್ನು ಈ ಬ್ಯಾನರ್‌ಗಳು ಹೊಂದಿವೆ. “ನಮ್ಮ ವಿರುದ್ಧದ ಆರೋಪಗಳು ಇದುವರೆಗೆ ಸಾಬೀತಾಗಿಲ್ಲ. ಆದುದರಿಂದ ಇದರಿಂದ ನಮಗೆ ಸಾರ್ವಜನಿಕವಾಗಿ ಅವಮಾನವಾಗಿದೆ. ನಾವು ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ” ಎಂದು ಈ ಬ್ಯಾನರ್‌ಲ್ಲಿ ಭಾವಚಿತ್ರ ಇರುವ ಕೆಲವು ಹೋರಾಟಗಾರರು ಹೇಳಿದ್ದಾರೆ.
ಮುಖ್ಯಮಂತ್ರಿ ಅವರ ನಿರ್ದೇಶನದಂತೆ ವಿಧಾನಸಭೆ ಕಟ್ಟಡದ ಎದುರು ಹಾಗೂ ಹಝ್ರತ್‌ಗಂಜ್‌ನ ಬ್ಯುಸಿ ಪ್ರದೇಶದ ಮುಖ್ಯ ಕ್ರಾಸಿಂಗ್ ಸೇರಿದಂತೆ ಪ್ರಮುಖ ತಿರುವುಗಳಲ್ಲಿ ಈ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ ಎಂದು ಸರಕಾರದ ವಕ್ತಾರ ತಿಳಿಸಿದ್ದಾರೆ ಈ ಬ್ಯಾನರ್‌ನಲ್ಲಿ ಇರುವ ಭಾವಚಿತ್ರಗಳು ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಸೊತ್ತುಗಳನ್ನು ನಾಶಮಾಡಿದ ವ್ಯಕ್ತಿಗಳದ್ದು. ಪರಿಹಾರ ನೀಡುವಂತೆ ಸೂಚಿಸಿ ಇವರಿಗೆ ಈಗಾಗಲೇ ನೋಟಿಸು ಜಾರಿ ಮಾಡಲಾಗಿದೆ ವಕ್ತಾರ ತಿಳಿಸಿದ್ದಾರೆ.







