ಸಿಎಜಿ ವರದಿ ಸೋರಿಕೆ: ತನಿಖೆಗೆ ಸಿಟ್ ರಚಿಸಿದ ಕೇರಳ ಸರಕಾರ
ತಿರುವನಂತಪುರ,ಮಾ.6: ನಾಪತ್ತೆಯಾಗಿರುವ ರೈಫಲ್‌ಗಳು ಮತ್ತು ಗುಂಡುಗಳ ಕುರಿತು ಸಿಎಜಿ ವರದಿಯು ಕಳೆದ ತಿಂಗಳು ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾಗುವ ಮೊದಲೇ ಅದರಲ್ಲಿನ ವಿಷಯಗಳು ಸೋರಿಕೆಯಾಗಿದ್ದವು ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆಗಾಗಿ ಕೇರಳ ಸರಕಾರವು ವಿಶೇಷ ತನಿಖಾ ತಂಡ (ಸಿಎಟಿ)ವೊಂದನ್ನು ರಚಿಸಿದೆ.
ಆಗಿದೆಯನ್ನಲಾಗಿರುವ ಸೋರಿಕೆಯ ಬಗ್ಗೆ ಡಿಜಿಪಿ ಲೋಕನಾಥ ಬೆಹರಾ ಅವರಿಂದ ವರದಿಯನ್ನು ಸ್ವೀಕರಿಸಿದ ಬಳಿಕ ಗೃಹ ಇಲಾಖೆಯು ಈ ಸಂಬಂಧ ಆದೇಶವನ್ನು ಹೊರಡಿಸಿದೆ.
ಬೆಹರಾ ಅವರನ್ನು ತರಾಟೆಗೆತ್ತಿಕೊಂಡಿದ್ದ ಸಿಎಜಿ ಆಡಿಟ್ ವರದಿಯು ಫೆ.12ರಂದು ವಿಧಾನಸಭೆಯಲ್ಲಿ ಮಂಡನೆಯಾಗುವ ಮೊದಲೇ ಅದರಲ್ಲಿನ ಕೆಲವು ವಿಷಯಗಳು ಸೋರಿಕೆಯಾಗಿವೆ ಎನ್ನಲಾಗಿದೆ ಎಂದು ರಾಜ್ಯ ಸರಕಾರವು ಕಳೆದ ತಿಂಗಳು ತಿಳಿಸಿತ್ತು.
ಇಲ್ಲಿಯ ವಿಶೇಷ ಸಶಸ್ತ್ರ ಪಡೆ ಬಟಾಲಿಯನ್‌ನಿಂದ 25 ಇನ್ಸಾಸ್ ರೈಫಲ್‌ಗಳು ಮತ್ತು 25,000ಕ್ಕೂ ಅಧಿಕ ಗುಂಡುಗಳು ನಾಪತ್ತೆಯಾಗಿವೆ ಎಂದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದ್ದು,ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದ್ದಕ್ಕಾಗಿ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ವರದಿಯು ಕಟುವಾಗಿ ಟೀಕಿಸಿತ್ತು.





