ಕೊರೊನ ವೈರಸ್ ಆತಂಕ : ಮಣಿಪುರದ ಸರಕಾರಿ ಕಚೇರಿಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ರದ್ದು

ಇಂಫಾಲ, ಮಾ.6: ಕೊರೊನ ವೈರಸ್ ವಿರುದ್ಧ ಮುಂಜಾಗರೂಕತಾ ಕ್ರಮವಾಗಿ ತಕ್ಷಣದಿಂದ ಅನ್ವಯವಾಗುವಂತೆ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಒಂದು ತಿಂಗಳ ಮಟ್ಟಿಗೆ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಬೀರೇನ್ ಸಿಂಗ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಕೊರೊನ ವೈರಸ್ ವಿರುದ್ಧ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಆರೋಗ್ಯ ಇಲಾಖೆ ಜನವರಿ 18ರಿಂದಲೇ ಸೂಕ್ತ ಕ್ರಮ ಕೈಗೊಂಡಿರುವುದರಿಂದ ರಾಜ್ಯದಲ್ಲಿ ಇದುವರೆಗೆ ಕೊರೊನ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದರು.
ರಾಜ್ಯಕ್ಕೆ ಆಗಮಿಸುವವರನ್ನು ಇಂಫಾಲ್ ನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ರಾಜ್ಯವನ್ನು ಪ್ರವೇಶಿಸುವ ಸ್ಥಳಗಳಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದ್ದು, ಇದುವರೆಗೆ 68,180 ವಿಮಾನ ಪ್ರಯಾಣಿಕರ ಸಹಿತ ಒಟ್ಟು 1,21,629 ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. 12 ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು ಇದರಲ್ಲಿ 10 ನೆಗೆಟಿವ್ ಫಲಿತಾಂಶ ಬಂದಿದ್ದರೆ ಎರಡರ ವರದಿ ಇನ್ನೂ ಬರಬೇಕಿದೆ. ರಾಜ್ಯಕ್ಕೆ ಮರಳಿರುವ 352 ಮಂದಿಯನ್ನು ಆರೋಗ್ಯ ಇಲಾಖೆಯ ನಿಗಾದಲ್ಲಿ ಇರಿಸಲಾಗಿದೆ. ರಾಜ್ಯಕ್ಕೆ ಭೇಟಿ ನೀಡಬಯಸುವವರು ಭಾರತ-ಮ್ಯಾನ್ಮಾರ್ ಗಡಿ ಸೇರಿದಂತೆ ರಾಜ್ಯವನ್ನು ಪ್ರವೇಶಿಸುವ ಸ್ಥಳಗಳಲ್ಲಿ ನೀಡುವ ಫಾರ್ಮ್ ಅನ್ನು ಭರ್ತಿ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪ್ರಾದೇಶಿಕ ವೈದ್ಯವಿಜ್ಞಾನ ಸಂಸ್ಥೆಯಲ್ಲಿ 8 ಹಾಸಿಗೆ ಹಾಗೂ 4 ವೆಂಟಿಲೇಟರ್ ವ್ಯವಸ್ಥೆಯುಳ್ಳ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದೆ. ಇದೇ ರೀತಿ 6 ಹಾಸಿಗೆ ಮತ್ತು 1 ವೆಂಟಿಲೇಟರ್ ವ್ಯವಸ್ಥೆಯುಳ್ಳ ಪ್ರತ್ಯೇಕ ವಾರ್ಡ್ ಅನ್ನು ಜವಾಹರಲಾಲ್ ನೆಹರೂ ವೈದ್ಯವಿಜ್ಞಾನ ಸಂಸ್ಥೆ(ಜೆಎನ್‌ಐಎಂಎಸ್) ಯಲ್ಲಿ ನಿರ್ಮಿಸಲಾಗಿದೆ. 24 ಗಂಟೆಯೂ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ ಕಾರ್ಯಾರಂಭ ಮಾಡಿದೆ(ಟೋಲ್‌ಫ್ರೀ ಸಂಖ್ಯೆ 0385-2411668) ಎಂದವರು ತಿಳಿಸಿದರು.
ಜನತೆ ಕೊರೊನ ವೈರಸ್ ಸೋಂಕು ನಿಯಂತ್ರಣಕ್ಕೆ ಸ್ವಯಂ ಕ್ರಮಗಳನ್ನು ಕೈಗೊಳ್ಳಬೇಕು. ಆಗಾಗ ಕೈಗಳನ್ನು ತೊಳೆಯುವುದು, ಮಾಸ್ಕ್ ಧರಿಸುವುದು, ಗುಂಪು ಸೇರುವುದನ್ನು ತಪ್ಪಿಸುವುದು, ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಅಡ್ಡಹಿಡಿಯುವುದು ಇತ್ಯಾದಿಗಳಿಂದ ಕೊರೊನ ವೈರಸ್ ಸೋಂಕು ಹರಡದಂತೆ ಮುಂಜಾಗರೂಕತೆ ವಹಿಸಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ವಿವರಿಸಿದರು. ಸರಕಾರದ ಮುಖ್ಯ ಕಾರ್ಯದರ್ಶಿ ಡಾ ಸುರೇಶ್ ಬಾಬು, ಪ್ರಧಾನ ಕಾರ್ಯದರ್ಶಿ (ಆರೋಗ್ಯ) ವಿ ವುಮ್ಲುನ್‌ಮಂಗ್, ಆರೋಗ್ಯ ಸೇವೆಗಳ ನಿರ್ದೇಶಕ ಡಾ ಕೆ ರಾಜೊ, ಜೆಎನ್‌ಐಎಂಎಸ್ ನಿರ್ದೇಶಕರು, ಆರೋಗ್ಯ ಇಲಾಖೆಯ ಸಿಬಂದಿಗಳು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.







