ಉದ್ಯೋಗಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಸಿಎಂ ಯಡಿಯೂರಪ್ಪ
ವಿಜಯೀಭವ ಶೈಕ್ಷಣಿಕ ವೆಬ್‌ಪೋರ್ಟಲ್‌ಗೆ ಚಾಲನೆ

ಬೆಂಗಳೂರು, ಮಾ.6: ಇಂದಿನ ಯುವಕರಿಗೆ ಚಾರಿತ್ರ್ಯ ನಿರ್ಮಾಣದ ಜತೆಗೆ ಉದ್ಯೋಗ ಸಿಗುವಂತಹ ಶಿಕ್ಷಣ ಒದಗಿಸಲು ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಹೊಸ ಕಟ್ಟಡ ಉದ್ಘಾಟಿಸಿ, ಮೈತ್ರಿ ಸಹಾಯವಾಣಿ, ವಿಜಯೀಭವ ಶೈಕ್ಷಣಿಕ ವೆಬ್‌ಪೋರ್ಟಲ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಆಡಳಿತ ವ್ಯವಸ್ಥೆಯನ್ನು ತಂತ್ರಜ್ಞಾನದ ನೆರನಿಂದ ಸಮರ್ಥವಾಗಿ ನಿರ್ವಹಿಸಲು ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಬೋಧಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪಾರದರ್ಶಕವಾಗಿ ಮಾಡಲಾಗುತ್ತಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಸಿಗುವುದಲ್ಲದೆ ಶಿಕ್ಷಣದ ಗುಣಮಟ್ಟ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಬೆಂಗಳೂರಿನಲ್ಲಿರುವ ಐತಿಹಾಸಿಕ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಈ ಉದ್ದೇಶಕ್ಕಾಗಿ 10 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಿದ್ದೇನೆ. ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಜಿಯೋ ಸ್ಪೇಷಿಯಲ್ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಅವರು ಹೇಳಿದ್ದಾರೆ.
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಏಷ್ಯಾ ಖಂಡದ ದೇಶಗಳ ಬೃಹತ್ ಶೈಕ್ಷಣಿಕ ಸಮಾವೇಶ ಮತ್ತು ಬೃಹತ್ ವಸ್ತುಪ್ರದರ್ಶನವನ್ನು ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಇಂದಿನ ಸಮಾರಂಭದಲ್ಲಿ ಹೊಸ ಕಟ್ಟಡ ಉದ್ಘಾಟನೆಯ ಜತೆಗೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಮೈತ್ರಿ ಎಂಬ ಸಹಾಯವಾಣಿ ಪ್ರಾರಂಭಿಸಿರುವುದು ಒಳ್ಳೆಯ ಕ್ರಮವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಜನರಿಗೆ ಸೂಕ್ತ ಮಾರ್ಗದರ್ಶನ, ಸ್ಫೂರ್ತಿ ನೀಡಲು ವಿಜಯೀಭವ ಎಂಬ ಯೂಟೂಬ್ ಚಾಲನೆ ಆರಂಭಿಸಿರುವುದು ಒಳ್ಳೆಯ ಕಾರ್ಯ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ಸಮಸ್ಯೆಗಳ ಕುರಿತು ಇವುಗಳ ಮೂಲಕ ಅಗತ್ಯ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಕ್ರಮಗಳಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಪರಿವರ್ತನೆ ತರಲಿ ಎಂದು ಆಶಿಸಿದ ಅವರು, ಸರಕಾರ ಮುಂದಿನ ದಿನಗಳಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಒಳ್ಳೆಯ ಯೋಜನೆ ಜಾರಿಗೊಳಿಸಿ ಸುಶಿಕ್ಷಿತ, ಸುಭಿಕ್ಷ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುವುದೆಂದು ತಿಳಿಸಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.







