ಅನ್ನಭಾಗ್ಯ ಯೋಜನೆಯಡಿ ತೊಗರಿಬೇಳೆ ನೀಡಲು ಚಿಂತನೆ: ಆಹಾರ ಸಚಿವ ಕೆ.ಗೋಪಾಲಯ್ಯ

ಬೆಂಗಳೂರು, ಮಾ. 6: ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಪಟ್ಟಿಯಲ್ಲಿರುವ ಕುಟುಂಬಗಳ(ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯನಿಗೆ ಹಂಚಿಕೆ ಮಾಡುತ್ತಿದ್ದ ಅಕ್ಕಿ-5 ಕೆಜಿ ಹಾಗೂ 2 ಕೆಜಿ ಗೋಧಿಯನ್ನು ನೀಡಲಿದ್ದು, ಜೊತೆಗೆ ತೊಗರಿಬೇಳೆಯನ್ನು ನೀಡಲು ಚಿಂತನೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೆಲ ಪ್ರದೇಶಗಳಲ್ಲಿ ಅಕ್ಕಿ ಬದಲಿಗೆ ರಾಗಿ ಮತ್ತು ಜೋಳ ನೀಡುವ ಬೇಡಿಕೆ ಇದೆ. ಅಲ್ಲದೆ, ತೊಗರಿಬೆಳೆ ನೀಡಬೇಕೆಂಬ ಒತ್ತಾಯವೂ ಇದೆ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ಶೀಘ್ರವೇ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪದೆ ದುರ್ಬಳಕೆ ಆಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ 2013-14ರಿಂದ ಈವರೆಗೆ 691 ಪ್ರಕರಣಗಳು ದಾಖಲಾಗಿದ್ದು, ಅವುಗಳ ವಿಲೇವಾರಿ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಕೆಲ ಜಿಲ್ಲೆಗಳ ಪ್ರವಾಸ ಮಾಡಿದ್ದು, ಉಳಿದ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಂಡು ಸೋರಿಕೆ ತಡೆ ಹಾಗೂ ಅನರ್ಹ ಫಲಾನುಭವಿಗಳ ಪಡಿತರ ಚೀಟಿ ರದ್ದು ಮಾಡಲಾಗುವುದು. ಅನ್ನಭಾಗ್ಯ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.
ಆರಂಭಕ್ಕೆ ಮಧ್ಯಪ್ರವೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕಡಿತ ಸಲ್ಲ. ಅರ್ಹ ಫಲಾನುಭವಿಗಳಿಗೆ 7 ಕೆಜಿ ಅಕ್ಕಿ ಕೊಡಿ. ಅಲ್ಲದೆ, ತೊಗರಿಬೇಳೆಯನ್ನು ನೀಡುವುದರಿಂದ ಪೌಷ್ಟಿಕ ಆಹಾರ ಸಿಗಲಿದೆ. ಹೀಗಾಗಿ ಬೇಳೆಯನ್ನು ನೀಡಿ ಎಂದರು.
ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ನ ಸದಸ್ಯ ಶ್ರೀನಿವಾಸಗೌಡ, ಬಡವರಿಗೆ ಉಚಿತವಾಗಿ ತೊಗರಿಬೇಳೆ ಮತ್ತು ಬೆಲ್ಲ ಕೊಡಿ, ಅವರು ಹೋಳಿಗೆ ಮಾಡಿಕೊಂಡು ತಿನ್ನಲಿ ಎಂದರು. ಕಾಂಗ್ರೆಸ್‌ನ ಶಿವಾನಂದ ಪಾಟೀಲ್, ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಿದ ತೊಗರಿ ದಾಸ್ತಾನು ಮಳಿಗೆಗಳಲ್ಲಿ ಹುಳು ಹಿಡಿಯುತ್ತಿದೆ. ಅದನ್ನು ಬಡವರಿಗೆ ನೀಡಿ ಎಂದರು. ಈ ಬಗ್ಗೆ ಪರಿಶೀಲಿಸಿ, ಸಿಎಂ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಗೋಪಾಲಯ್ಯ ಭರವಸೆ ನೀಡಿದರು.







