ಸಹಾಯಕ ಸರಕಾರಿ ಅಭಿಯೋಜಕರ ಪರೀಕ್ಷಾ: ಪೂರ್ವಭಾವಿ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ, ಮಾ.6: ಇಂದು ಕಾನೂನು ವೃತ್ತಿಗಳಿಗೆ ಹೆಚ್ಚಿನ ಬೇಡಿಕೆಗಳು ವ್ಯಕ್ತ ವಾಗುತ್ತಿದ್ದು, ಸಮಾಜದಲ್ಲಿ ವಕೀಲರ ಅವಶ್ಯಕತೆ ಹೆಚ್ಚಾಗಿದೆ. ಆದುದರಿಂದ ವಕೀಲರು ಪೈಪೋಟಿಯನ್ನು ಎದುರಿಸಲು ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ.
ಉಡುಪಿ ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗಳ ಜಂಟಿ ಆಶ್ರಯದಲ್ಲಿ 14 ದಿನ ಕಾಲ ನಡೆಯಲಿರುವ ಸಹಾಯಕ ಸರಕಾರಿ ಅಭಿಯೋಜಕರ ಪರೀಕ್ಷಾ ಪೂರ್ವಭಾವಿ ತರಬೇತಿ ಶಿಬಿರವನ್ನು ಇಂದು ನಗರದ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿವಿಲ್ ವಕೀಲರು ಜ್ಞಾನಕ್ಕೆ ಒತ್ತು ನೀಡಬೇಕು. ಇತ್ತೀಚೆಗೆ ಕಾನೂನು ವಿಭಾಗ ಗಳಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಸರಕಾರ ಮತ್ತು ಕಕ್ಷಿದಾರರನ್ನು ಸಮರ್ಥಿಸಿಕೊಳ್ಳುವುದು ಸಾಕಷ್ಟು ಕಠಿಣ ಸವಾಲುಗಳಾಗಿವೆ. ಹುದ್ದೆಗಳಿಗಾಗಿ ಪರೀಕ್ಷೆ ಬರೆಯುವಾಗ ಗುರಿ ಇಟ್ಟುಕೊಳ್ಳಬೇಕು. ಆಗ ಯಶಸ್ಸು ದೊರೆಯಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಂಗಳೂರಿನ ಹಿರಿಯ ವಕೀಲ ಪಿ.ರಂಜನ್ ರಾವ್ ಮಾತನಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ ವಂದಿಸಿದರು. ವಕೀಲ ರಾಜಶೇಖರ್ ಶಾವುರಾವ್ ಕಾರ್ಯಕ್ರಮ ನಿರೂಪಿಸಿದರು.







