ಮೈಸೂರಿನಲ್ಲಿ ಕೊರೋನ ವೈರಸ್ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಸ್ಪಷ್ಟನೆ

ಮೈಸೂರು,ಮಾ.6: ಮೈಸೂರಿಗರಿಗೆ ಕೊರೋನ ಭೀತಿ ಬೇಡ. ಮೈಸೂರಿನಲ್ಲಿ ಈ ಸೋಂಕಿನ ಲಕ್ಷಣಗಳು ಇರುವವರು ಯಾರೂ ಪತ್ತೆ ಆಗಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಿಂದ ಹೊರ ದೇಶಕ್ಕೆ ಹೋಗಿ ಬಂದವರನ್ನು ತಪಾಸಣೆಗೆ ಒಳಪಡಿಲಾಗುತ್ತಿದೆ. ಮಾಸ್ಕ್ ನ್ನು ಅನಗತ್ಯವಾಗಿ ಧರಿಸುವ ಅಗತ್ಯ ಇಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಈ ರೀತಿ ರೋಗ ಲಕ್ಷಣಗಳು ಕಂಡುಬಂದರೆ ಅವರನ್ನು ಕೂಡಲೇ ವಿಶೇಷ ಚಿಕಿತ್ಸಾ ಕೊಠಡಿಯಲ್ಲಿ ಇರಿಸಿ ತಪಾಸಣೆ ಮಾಡಲಾಗುವುದು ಎಂದರು.
ಸಾರ್ವಜನಿಕರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಜ್ವರ, ತಲೆನೋವು , ಕೆಮ್ಮು, ಕಣ್ಣು ಮೂಗು ಬಾಯಿಯಲ್ಲಿ ಇನ್ಫೆಕ್ಷನ್ ಕಂಡು ಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು. ಕೆ.ಆರ್ ಆಸ್ಪತ್ರೆಯಲ್ಲಿ, ಜಿಲ್ಲಾ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ಯಾರೂ ಕೂಡ ಅನಗತ್ಯವಾಗಿ ಭಯಪಡಬೇಕಿಲ್ಲ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.







