ರಾಜ್ಯ ಮಟ್ಟದ ಪತ್ರಕರ್ತರ ಸಮಾಗಮಕ್ಕೆ ಭರದ ಸಿದ್ಧತೆ

ಮಂಗಳೂರು : ಕಡಲ ನಗರಿ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಪ್ರಥಮ ಸಮ್ಮೇಳನಕ್ಕೆ ಕೊನೆ ಹಂತದ ಸಿದ್ಧತೆಗಳು ನಡೆದಿವೆ. ಇಂದು ಸಂಜೆಯ ವೇಳೆಗೆ ರಾಜ್ಯದ ವಿವಿಧ ಕಡೆಗಳಿಂದ ಪತ್ರಿಕಾ ಪ್ರತಿನಿಧಿಗಳು ನಗರಕ್ಕೆ ಬರಲಾರಂಭಿಸಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಯ ಪ್ರತಿನಿಧಿಗಳಿಗೆ ವಾಸ್ತವ ದ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ರಾಜ್ಯ ಪತ್ರಕರ್ತರ 35ನೇ ಸಮ್ಮೇಳನ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಪುರಭವನದ ದಿ. ವಡ್ಡರ್ಸೆ ರಘರಾಮ ಶೆಟ್ಟಿ ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಾನಿದ್ಯದಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾ.೭ರಂದು ಉದ್ಘಾಟಿಸುವರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು. ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ಸಮ್ಮೇಳನದ ಆಶಯ ಭಾಷಣ ಮಾಡಲಿರುವರು. ಉಪ ಮುಖ್ಯ ಮಂತ್ರಿ ಸಿಎನ್ ಅಶ್ವತ್ಥ ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.
ಮಾ. 7ರಂದು ಸಮ್ಮೇಳನ
ಉದ್ಘಾಟನಾ ಸಮಾರಂಭದ ಬಳಿಕ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎ. ವಿವೇಕ ಉಡುಪ ಅವರು ಪತ್ರಕರ್ತರ ಮಾನಸಿಕ ಒತ್ತಡ ಮತ್ತು ಆರೋಗ್ಯ ನಿರ್ವಹಣೆ ಬಗ್ಗೆ ಮಾತನಾಡಲಿರುವರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆಯಲ್ಲಿ ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಪ್ರಜಾವಾಣಿಯ ಸಂಪಾದಕ ರವೀಂದ್ರ ಭಟ್ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಮಾಧ್ಯಮ ಎಂಬ ಗೋಷ್ಠಿ ನಡೆಯಲಿದೆ.







