ಉಪ್ಪಿನಂಗಡಿ: ಕಳವು ಆರೋಪಿ ಸೆರೆ
ಉಪ್ಪಿನಂಗಡಿ: ಸಂಶಯಾದಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ತೆಗೆದುಕೊಂಡು ಉಪ್ಪಿನಂಗಡಿ ಪೊಲೀಸರು ವಿಚಾರಣೆ ನಡೆಸಿದಾಗ ಬಂಟ್ವಾಳ, ಪುತ್ತೂರು ನಗರ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಹಲವು ಕಡೆಗಳಲ್ಲಿ ಈತ 10ಕ್ಕೂ ಅಧಿಕ ಮನೆ ಕಳ್ಳತನ ನಡೆಸಿರುವ ವಿಷಯ ಬೆಳಕಿಗೆ ಬಂದಿದೆ. ಈತನನ್ನು ಮಾ.6ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಉಪ್ಪಿನಂಗಡಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.
ಮೂಲತಃ ಚಿಕ್ಕಮಗಳೂರು ನಿವಾಸಿ, ಮಾಣಿಯಲ್ಲಿ ವಾಸ್ತವ್ಯವಿರುವ ಶೌಕತ್ ಅಲಿ ಯಾನೆ ಶೌಕತ್ ಬಂಧಿತ ಆರೋಪಿ. 34ನೇ ನೆಕ್ಕಿಲಾಡಿ ಪೇಟೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದು, ಈ ಸಂದರ್ಭ ಇತ್ತೀಚೆಗೆ ಉಪ್ಪಿನಂಗಡಿಯ ಕೆಂಪಿಮಜಲು ಬಳಿಯ ಕೋಟೆಯಲ್ಲಿ ನಡೆದ ಮನೆ ಕಳ್ಳತನ ಸೇರಿದಂತೆ ಬಂಟ್ವಾಳ, ಪುತ್ತೂರು ನಗರ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳ್ಳತನ ನಡೆಸಿ, ಚಿನ್ನಾಭರಣ ಹಾಗೂ ನಗದನ್ನು ದೋಚಿರುವುದನ್ನು ಈತ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಈತನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





