124 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ: ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು, ಮಾ.6: ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ 176 ತಾಲೂಕುಗಳ ಪೈಕಿ 124 ತಾಲೂಕುಗಳಲ್ಲಿ ಅಂತರ್ಜಲ ಸ್ಥಿರ ಮಟ್ಟದಲ್ಲಿ ಕುಸಿತ ಕಂಡಿದ್ದು, 54 ತಾಲೂಕುಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಶುಕ್ರವಾರ ವಿಧಾನಪರಿಷತ್ತಿನಲ್ಲಿ ಪಿ.ಆರ್.ರಮೇಶ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಇರುವ ಒಟ್ಟು 1737 ಬಾವಿ/ಕೊಳವೆ ಬಾವಿಗಳಲ್ಲಿ ಪ್ರತಿ ಮಾಹೆಯಾನ ದಾಖಲಿಸಿದ ಸ್ಥಿರ ಜಲಮಟ್ಟ ಮಾಪನದಂತೆ 2015 ರಿಂದ 2019 ರವರೆಗೆ ತಾಲೂಕುವಾರು ವಾರ್ಷಿಕ ಸರಾಸರಿ ಅಂತರ್ಜಲ ಸ್ಥಿರ ಮಟ್ಟದ ವ್ಯತ್ಯಾಸದಂತೆ ಇಳಿಕೆ ಹಾಗೂ ಏರಿಕೆ ಕಂಡುಬಂದಿದೆ ಎಂದು ಹೇಳಿದರು.
ರಾಜ್ಯದ ಒಟ್ಟು 3.99 ಕೋಟಿ ಗ್ರಾಮೀಣ ಜನಸಂಖ್ಯೆಯಲ್ಲಿ 2.20 ಕೋಟಿ ಗ್ರಾಮೀಣ ಜನರಿಗೆ ಕೊಳವೆ ಬಾವಿಗಳಿಂದ ನೀರನ್ನು ಒದಗಿಸಲಾಗುತ್ತಿದೆ. ಅಂತರ್ಜಲ ನಿರ್ದೇಶನಾಲಯದಿಂದ 13, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 1714 ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ 8484 ಸೇರಿ ಒಟ್ಟು 10211 ಭೂಗೋಳ ರಚನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.





