ಕೊರೋನ ಎಫೆಕ್ಟ್: ದಿಲ್ಲಿ ಶೂಟಿಂಗ್ ವಿಶ್ವಕಪ್ ಮುಂದೂಡಿಕೆ

ಹೊಸದಿಲ್ಲಿ, ಮಾ.6: ಹೊಸದಿಲ್ಲಿಯಲ್ಲಿ ನಡೆಯಬೇಕಾಗಿದ್ದ ಶೂಟಿಂಗ್ ವಿಶ್ವಕಪ್‌ನ್ನು ಮುಂದೂಡ ಲಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ಭಾರೀ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಟೋಕಿಯೊದಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಟೆಸ್ಟ್ ಸ್ಪರ್ಧೆಯನ್ನೂ ರದ್ದುಪಡಿಸಲಾಗಿದೆ.
ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್)ಮಾನ್ಯತೆ ಇರುವ ಶೂಟಿಂಗ್ ವಿಶ್ವಕಪ್ ದಿಲ್ಲಿಯ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಮಾರ್ಚ್ 15ರಿಂದ 25ರ ತನಕ ನಿಗದಿಪಡಿಸಲಾಗಿತ್ತು. ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ಎಪ್ರಿಲ್ 16ಕ್ಕೆ ನಿಗದಿಯಾಗಿತ್ತು.
‘‘ದಿಲ್ಲಿಯಲ್ಲಿ ನಡೆಯಬೇಕಾಗಿದ್ದ ಟೂರ್ನಮೆಂಟ್ ಒಲಿಂಪಿಕ್ ಗೇಮ್ಸ್‌ಗಿಂತ ಮೊದಲು ಎರಡು ವಿಭಾಗಗಳಲ್ಲಿ ನಡೆಯಲಿದೆ. ಶೀಘ್ರವೇ ಟೂರ್ನಿಯ ದಿನಾಂಕವನ್ನು ಘೋಷಿಸಲಾಗುವುದು’’ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನ ವೈರಸ್‌ನಿಂದ ಬಾಧಿತವಾಗಿರುವ ಚೀನಾ, ಇಟಲಿ, ದಕ್ಷಿಣ ಕೊರಿಯ, ಜಪಾನ್ ಹಾಗೂ ಇರಾನ್ ದೇಶಗಳಿಂದ ಬರುವ ಶೂಟಿಂಗ್ ಸ್ಪರ್ಧಾಳುಗಳಿಗೆ ಹಲವು ರೀತಿಯ ನಿರ್ಬಂಧಗಳನ್ನು ಕೇಂದ್ರ ಸರಕಾರ ಹೇರಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ‘‘ಗುರುವಾರದ ರಾತ್ರಿ ತನಕ ಒಟ್ಟು 22 ದೇಶಗಳು ಟೂರ್ನಿಯಿಂದ ಹೊರಗುಳಿದಿವೆ. ಸ್ಪರ್ಧೆಯಿಂದ ಹಿಂದೆ ಸರಿದಿರುವ ಕೆಲವು ದೇಶಗಳು ವೀಸಾಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಿವೆ’’ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಭಾರತ ಸೈಪ್ರಸ್‌ನಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಿಂದ ಹೊರಗುಳಿದಿತ್ತು. ಕೊರೋನ ವೈರಸ್ ಭೀತಿಯನ್ನು ಮುಂದಿಟ್ಟುಕೊಂಡು ಭಾರತ ಈ ನಿರ್ಧಾರಕ್ಕೆ ಬಂದಿತ್ತು. ಕೊರೋನ ವೈರಸ್‌ನಿಂದಾಗಿ 3,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ವಿಶ್ವದೆಲ್ಲೆಡೆ 1 ಲಕ್ಷ ಜನರು ಸೋಂಕು ಪೀಡಿತರಾಗಿದ್ದಾರೆ. ಭಾರತ ಸರಕಾರ ಆರೋಗ್ಯ ಸಲಹೆ ನೀಡಿರುವ ಕಾರಣ ಟೂರ್ನಿಯಲ್ಲಿ ಎಲ್ಲ ದೇಶಗಳು ಭಾಗವಹಿಸುವುದಿಲ್ಲ. ಹೀಗಾಗಿ ದಿಲ್ಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ರ್ಯಾಂಕಿಂಗ್ ಪಾಯಿಂಟ್ಸ್ ಇರುವುದಿಲ್ಲ ಎಂದು ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ಬುಧವಾರ ಘೋಷಿಸಿತ್ತು.







