ಪಾಕಿಸ್ತಾನ ಝಿಂದಾಬಾದ್ ಘೋಷಣೆ: ವಕೀಲರ ಸಂಘ ನಿರ್ಣಯ ವಾಪಸ್ ಪಡೆದಿದೆ- ಹೈಕೋರ್ಟ್‌ಗೆ ಹೇಳಿಕೆ

ಬೆಂಗಳೂರು, ಮಾ.6: ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ ಆರೋಪದಲ್ಲಿ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಪರ ವಕೀಲರು ವಕಾಲತ್ತು ಹಾಕದಂತೆ ಕೈಗೊಂಡಿದ್ದ ನಿರ್ಣಯವನ್ನು ಹುಬ್ಬಳ್ಳಿ ವಕೀಲರ ಸಂಘ ವಾಪಸ್ ಪಡೆದಿದೆ. ಆರೋಪಿಗಳ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಸರಕಾರದ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಈ ಕುರಿತು ವಕೀಲ ಬಿ.ಟಿ.ವೆಂಕಟೇಶ್ ಸೇರಿ 24 ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಪರ ಜಾಮೀನು ಕೋರಿ ಹುಬ್ಬಳ್ಳಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ತೀರ್ಪು ಮಾ.9ರಂದು ಬರಲಿದೆ ಎಂದು ಪೀಠಕ್ಕೆ ತಿಳಿಸಿದರು. ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.
ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ಸಂವಿಧಾನದ ವಿಧಿ 21 ಮತ್ತು 22ರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು, ಅದನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.







