ಮರಗಳ್ಳತನದ ಬಗ್ಗೆ ಮಾಹಿತಿ ನೀಡಿದ ಶಂಕೆ: ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಮರಗಳ್ಳರು- ಆರೋಪ

ಚಿಕ್ಕಮಗಳೂರು, ಮಾ.6: ಮರಗಳ್ಳತನ ಮಾಡುತ್ತಿದ್ದ ಪ್ರಭಾವಿಗಳ ವಿರುದ್ಧ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆಂಬ ಕಾರಣಕ್ಕೆ ಇಬ್ಬರು ಮರಗಳ್ಳರು ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ತಾಲೂಕಿನ ಕೆಸುವಿನಮನೆ ಗ್ರಾಮದಲ್ಲಿ ವರದಿಯಾಗಿದೆ.
ಕೆಸುವಿನಮನೆ ಗ್ರಾಮದ ಆದರ್ಶ ಎಂಬ ಯುವಕ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದು, ಇದೇ ಗ್ರಾಮದ ರಮೇಶ್ ಹಾಗೂ ರಾಜೇಶ್ ಎಂಬವರು ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆಂದು ತಿಳಿದು ಬಂದಿದೆ.
ರಾಜೇಶ್ ಹಾಗೂ ರಮೇಶ್ ಎಂಬ ಪ್ರಭಾವಿಗಳು ತಾಲೂಕಿನ ಕೆಸುವಿನಮನೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮರಗಳನ್ನು ಕಡಿದು ಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಲಾಗಿದ್ದು, ಈ ಸಂಬಂಧ ಯುವಕ ಆದರ್ಶ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತ ನೀಡಿದ್ದಾನೆಂಬ ಶಂಕೆ ಮೇಲೆ ಶುಕ್ರವಾರ ಬೆಳಗ್ಗೆ ಕೆಸುವಿನ ಮನೆ ಗ್ರಾಮದ ಆದರ್ಶನ ಮೇಲೆ ದಾಳಿ ಮಾಡಿರುವ ಆರೋಪಿಗಳು ತಲೆಗೆ ತೀವ್ರ ಹಲ್ಲೆ ಮಾಡಿದ್ದಲ್ಲದೇ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆಂದು ಆದರ್ಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಮಾರಣಾಂತಿಕವಾಗಿ ಗಾಯಗೊಂಡಿರುವ ಆದರ್ಶ್‍ನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದಿರುವುದರಿಂದ ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ಆದರ್ಶ್ ದೂರು ನೀಡಿದ್ದು, ಪೊಲೀಸರು ಪ್ರಭಾವಿಗಳೆಂಬ ಕಾರಣಕ್ಕೆ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದಾರೆಂದು ಆದರ್ಶ್ ಪೋಷಕರು ಆರೋಪಿಸಿದ್ದಾರೆ.





