ಚೆಸ್ ಒಲಿಂಪಿಯಾಡ್ : ಭಾರತಕ್ಕೆ ಆನಂದ್, ಹಂಪಿ ನೇತೃತ್ವ

ಚೆನ್ನೈ, ಮಾ.6: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮಾಸ್ಕೊದಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ 44ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ. ಚೆಸ್ ದಂತಕತೆ ವ್ಲಾಡಿಮಿರ್ ಕ್ರಾಮ್ನಿಕ್ ಪುರುಷರ ಚೆಸ್ ತಂಡಕ್ಕೆ ತರಬೇತಿ ನೀಡಲಿದ್ದಾರೆ.
ವಿಶ್ವದ ನಂ.2ನೇ ಚೆಸ್ ತಾರೆ ಕೊನೆರು ಹಂಪಿ ಭಾರತದ ಮಹಿಳಾ ತಂಡದ ನೇತೃತ್ವವಹಿಸಲಿದ್ದಾರೆ. ಮಹಿಳಾ ಚೆಸ್ ಸ್ಪರ್ಧೆಯಲ್ಲಿ ಸುಮಾರು 180 ದೇಶಗಳು ಭಾಗವಹಿಸುವ ಸಾಧ್ಯತೆಯಿದೆ ಎಂದು ಅಖಿಲ ಭಾರತ ಚೆಸ್ ಒಕ್ಕೂಟ ತಿಳಿಸಿದೆ.
44ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್ ಆಗಸ್ಟ್ 5ರಿಂದ 18ರ ತನಕ ನಡೆಯಲಿದೆ.
50ರ ಹರೆಯದ ಆನಂದ್‌ರಲ್ಲದೆ ಗ್ರಾಂಡ್‌ಮಾಸ್ಟರ್‌ಗಳಾದ ಪಿ.ಹರಿಕೃಷ್ಣ ಹಾಗೂ ವಿದಿತ್ ಗುಜರಾತಿ ಪುರುಷರ ತಂಡದಲ್ಲಿ ತಮ್ಮ ಸ್ಥಾನ ದೃಢಪಡಿಸಿಕೊಳ್ಳುವ ನಿರೀಕ್ಷೆಯಿದೆ. ಐವರು ಸದಸ್ಯರ ಪುರುಷರ ತಂಡದಲ್ಲಿ ಇನ್ನೆರಡು ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇದೆ.
ಕೆ. ಶಶಿಕಿರಣ್, ಸೇತುರಾಮನ್, ಸೂರ್ಯ ಶೇಖರ ಗಂಗುಲಿ ಹಾಗೂ ಅರವಿಂದ ಚಿದಂಬರಂ ಇನ್ನುಳಿದ ಸ್ಥಾನಕ್ಕಾಗಿ ಸ್ಪರ್ಧಿಸಲಿದ್ದಾರೆ.
ರ್ಯಾಂಕಿಂಗ್‌ನ ಆಧಾರದಲ್ಲಿ ಹಂಪಿ ಹಾಗೂ ದ್ರೋಣವಲ್ಲಿ ಹರಿಕಾ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದ ಮೂರು ಸ್ಥಾನಗಳಿಗಾಗಿ ತಾನಿಯಾ ಸಚ್‌ದೇವ್, ಭಕ್ತಿ ಕುಲಕರ್ಣಿ ಹಾಗೂ ಆರ್.ವೈಶಾಲಿ ಸ್ಪರ್ಧೆಯಲ್ಲಿದ್ದಾರೆ.
ಮುಂಬರುವ ತಿಂಗಳಲ್ಲಿ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆಂಬ ಆಧಾರದಲ್ಲಿ ತಂಡಕ್ಕೆ ಸಂಬಂಧಿಸಿ ಅಂತಿಮ ತೀರ್ಮಾನವಾಗಲಿದೆ ಎಂದು ಎಐಸಿಎಫ್ ತಿಳಿಸಿದೆ. ನಿಯಮ ಪ್ರಕಾರ ಮೇ 1ರೊಳಗೆ ತಂಡದ ಸಂಯೋಜನೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.







