ಎಲ್ಲ ಮಾದರಿಯ ಕ್ರಿಕೆಟ್‌ನಿಂದ ವಸೀಂ ಜಾಫರ್ ನಿವೃತ್ತಿ

ಹೊಸದಿಲ್ಲಿ, ಮಾ.7: ಹಿರಿಯ ಬ್ಯಾಟ್ಸ್‌ಮನ್ ವಸೀಂ ಜಾಫರ್ ಶನಿವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. 42ರ ಹರೆಯದ ಜಾಫರ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
1996-97ರ ಋತುವಿನಲ್ಲಿ ಮುಂಬೈ ತಂಡದ ಪರ ಆಡುವ ಮೂಲಕ ವೃತ್ತಿಜೀವನಕ್ಕೆ ಕಾಲಿಟ್ಟ ಜಾಫರ್ 2015-16 ಋತುವಿನಲ್ಲಿ ವಿದರ್ಭ ತಂಡದ ಪರ ಆಡಲು ಆರಂಭಿಸಿದರು. ಕಳೆದ ವರ್ಷದ ರಣಜಿಯಲ್ಲಿ 1,037 ರನ್ ಗಳಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು.
ಒಟ್ಟಾರೆ ಜಾಫರ್ 260 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 50.67ರ ಸರಾಸರಿಯಲ್ಲಿ 19,410 ರನ್ ಗಳಿಸಿದ್ದಾರೆ. ಇದರಲ್ಲಿ 57 ಶತಕ ಹಾಗೂ 91 ಅರ್ಧಶತಕಗಳಿವೆ. ಗರಿಷ್ಠ ವೈಯಕ್ತಿಕ ಸ್ಕೋರ್ 314. ಕೇರಳ ವಿರುದ್ಧ ಫೆಬ್ರವರಿ 2020ರಲ್ಲಿ ಆಡಿದ ರಣಜಿ ಟ್ರೋಫಿ ತನ್ನ ಕೊನೆಯ ಇನಿಂಗ್ಸ್‌ನಲ್ಲಿ ಜಾಫರ್ 57 ರನ್ ಗಳಿಸಿದ್ದು, ಇದು ಅವರ 91ನೇ ಅರ್ಧಶತಕವಾಗಿತ್ತು.
ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದ ಜಾಫರ್ 2000 ಹಾಗೂ 2008ರ ಮಧ್ಯೆ 31 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 5 ಶತಕ ಹಾಗೂ 11 ಅರ್ಧಶತಕಗಳ ಸಹಿತ ಒಟ್ಟು 1,944 ರನ್ ಗಳಿಸಿದ್ದರು. 2006ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ದ್ವಿಶತಕ(212)ಗಳಿಸಿದ್ದು ಇದು ಅವರ ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು. ಭಾರತದ ಪರ ಕೇವಲ 2 ಏಕದಿನ ಪಂದ್ಯವನ್ನಾಡಿದ್ದರು.
‘‘ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸುವಂತೆ ಪ್ರೋತ್ಸಾಹಿಸಿದ ನನ್ನ ಹೆತ್ತವರು ಹಾಗೂ ಸಹೋದರರಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ನನ್ನ ಶಾಲಾ ದಿನಗಳಿಂದ ವೃತ್ತಿಪರ ಕ್ರಿಕೆಟ್ ತನಕದ ಎಲ್ಲ ನನ್ನ ಕೋಚ್‌ಗಳಿಗೆ ವಿಶೇಷ ಧನ್ಯವಾದ ಹೇಳುವೆ. ನನ್ನ ಮೇಲೆ ನಂಬಿಕೆ ಇಟ್ಟಿರುವ ಆಯ್ಕೆಗಾರರಿಗೆ ಹೃತ್ಪೂರ್ವಕ ವಂದನೆಗಳು. ತಂಡವನ್ನು ಪ್ರತಿನಿಧಿಸಲು ಅವಕಾಶ ನೀಡಿದ ಬಿಸಿಸಿಐ, ಮುಂಬೈ ಕ್ರಿಕೆಟ್ ಸಂಸ್ಥೆ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆಗೆ ಚಿರ ಋಣಿಯಾಗಿರುವೆ’’ ಎಂದು ವಸೀಂ ಜಾಫರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.







