ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ ನಡೆಸುವ ಬೆದರಿಕೆ ಆರೋಪ: ಯೂಟ್ಯೂಬ್ ಚಾನೆಲ್ ನ ಐವರ ಬಂಧನ

Photo: facebook
ಬೆಂಗಳೂರು, ಮಾ.7: ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ ನಡೆಸುವ ಬೆದರಿಕೆ ಹಾಕಿದ ಆರೋಪದಡಿ ಯೂಟ್ಯೂಬ್ ಚಾನೆಲ್ವೊಂದರ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ನಗರದ ನಿವಾಸಿಗಳಾದ ರವಿಕುಮಾರ್(48), ಮುನಿರಾಜ(61), ಮುರಳಿ(34), ಮನೋಜ್ ಕುಮಾರ್(24) ಹಾಗೂ ಮಂಜುನಾಥ್(40) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಫೆ.28 ಮತ್ತು ಮಾ.4ರಂದು ದೂರುದಾರರ ಸ್ನೇಹಿತರ ಮೊಬೈಲ್ ಗೆ ಮುರಳಿ ಎಂಬಾತ ಕರೆ ಮಾಡಿ ವಿನಯ್ ಗುರೂಜಿ ಬಗ್ಗೆ ದೃಶ್ಯಮಾಧ್ಯಮ ಹಾಗೂ ಯೂಟ್ಯೂಬ್ ನಲ್ಲಿ ಕೆಟ್ಟದಾಗಿ ಸುದ್ದಿಗಳನ್ನು ಹಾಕಿರುವುದಾಗಿ ತಿಳಿಸಿದ್ದು, ಈ ಸಂಬಂಧ ಚಾನೆಲೊಂದರಲ್ಲಿ ಮುನಿರಾಜು, ರವಿಕುಮಾರ್, ಮನೋಜ್ ಪಂಡಿತ್ ವೀಡಿಯೋ ಕಾಲ್ ನಲ್ಲಿ ಮಾತನಾಡಲು ಪ್ರಯತ್ನಿಸಿದ್ದರು.
ನಂತರದಲ್ಲಿ ರವಿಕುಮಾರ್ ಎಂದು ಹೆಸರೇಳಿಕೊಂಡು ಮಾತನಾಡಿ, ನೀವು ವಿನಯ್ ಗುರೂಜಿ ಭಕ್ತರೆಂದು ತಿಳಿದಿದ್ದು, ನಮ್ಮವರು ನಿಮ್ಮ ಬಳಿ ಮಾತನಾಡಿದ್ದಾರೆ, ಹಣ ತಲುಪಿಸಿದರೆ ಎಲ್ಲ ಸರಿಹೋಗುತ್ತದೆ. ಮುಂದಿನ ದಿನಗಳಲ್ಲಿ ಗುರೂಜಿ ಬಗ್ಗೆ ಯಾವುದೇ ಅಪಪ್ರಚಾರ ಮಾಡುವುದಿಲ್ಲ. ನೀವು 30 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ ಕೆಟ್ಟದಾಗಿ ಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು 5 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧರ್ಮ ಜಾಗೃತಿ ಮಾಡಿದ್ದಕ್ಕೆ ಬಂಧನ?
ಧರ್ಮ ಗುರುಗಳು, ಸ್ವಾಮೀಜಿಗಳು ನಡೆಸುವ ಪವಾಡಗಳು ಅವೈಜ್ಞಾನಿಕ ಎಂದು ಕಾವೇರಿ ಯೂಟ್ಯೂಬ್ ಚಾಲನೆಯಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ನಡೆಸಲಾಗುತಿತ್ತು. ಇತ್ತೀಚಿಗೆ ವಿನಯ್ ಗುರೂಜಿ ಮಾಡುವ ಲಿಂಗ ಪವಾಡವನ್ನು ವೈಜ್ಞಾನಿಕ ರೀತಿಯಲ್ಲಿ ಡಾ.ಹುಲಿಕಲ್ ನಟರಾಜ್ ಭೇದಿಸಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಐವರನ್ನು ಬಂಧಿಸಲಾಗಿದೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.







