ಕೊರೋನ ವೈರಸ್: ರಾಜ್ಯದಲ್ಲಿ 77,469 ಪ್ರಯಾಣಿಕರ ತಪಾಸಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.7: ನೋವೆಲ್ ಕೊರೋನ ವೈರಸ್ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ 77,469 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. 104 ಆರೋಗ್ಯ ಸಹಾಯವಾಣಿ ಮೂಲಕ 9705 ಕರೆಗಳನ್ನು ಸ್ವೀಕರಿಸಿ, ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4,111, ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23,764 ಹಾಗೂ ಮಂಗಳೂರು ಮತ್ತು ಕಾರವಾರ ಕಡಲ ಬಂದರುಗಳಲ್ಲಿ 5214 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ.
ರಾಜ್ಯವು ರೋಗ ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಎಲ್ಲ ಸರ್ವೇಕ್ಷಣೆ ಮತ್ತು ಧಾರಕ ಕ್ರಮಗಳನ್ನು ಬಲಪಡಿಸಿದೆ. ಈವರೆಗೆ 789 ಜನರನ್ನು ಅವಲೋಕನೆಗಾಗಿ ಗುರುತಿಸಲಾಗಿದೆ. ಅವರಲ್ಲಿ 251 ಜನರು ಅವಲೋಕನೆ ಅವಧಿಯ 28 ದಿನಗಳನ್ನು ಮುಗಿಸಿದ್ದಾರೆ. ಮತ್ತು 525 ಜನರು ಮನೆಯಲ್ಲೆ ಪ್ರತ್ಯೇಕವಿರುವುದನ್ನು ಮುಂದುವರೆಸಲಾಗಿದೆ. ರೋಗ ಲಕ್ಷಣವಿರುವವರ 400 ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ ಮತ್ತು 326 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದೆ.
ಸಾರ್ವಜನಿಕರಿಗೆ ಸಲಹೆಗಳು: ನೀವು ಆರೋಗ್ಯವಂತರಾಗಿದ್ದು, ಶಂಕಿತ ಸೋಂಕು ಇರುವವರ ಆರೈಕೆ ಮಾಡುತ್ತಿದ್ದರೆ ಮಾತ್ರ ಮಾಸ್ಕ್ ಧರಿಸಿ, ನಿಮಗೆ ಕೆಮ್ಮು ಅಥವಾ ನೆಗಡಿ ಇದ್ದರೆ ಮಾಸ್ಕ್ ಧರಿಸಿರಿ, ಮಾಸ್ಕ್ ಧರಿಸುವುದರ ಜೊತೆಗೆ ಸೋಪು ಮತ್ತು ನೀರಿನಿಂದ ಕೈತೊಳೆದುಕೊಳ್ಳುವುದನ್ನು ಮಾಡಿದರೆ ಮಾತ್ರ ಪರಿಣಾಮಕಾರಿಯಾಗಿರಬಲ್ಲದು.
ಮಾಸ್ಕ್ ಧರಿಸುವ ಮುನ್ನ ನಿಮ್ಮ ಕೈಗಳನ್ನು ಆಲ್ಕೋಹಾಲ್ ಆಧಾರಿತ ದ್ರಾವಣ ಅಥವಾ ಸೋಪು ಮತ್ತು ನೀರಿನಿಂದ ಕೈತೊಳೆದುಕೊಳ್ಳಿ, ಬಾಯಿ ಮತ್ತು ಮೂಗುಗಳನ್ನು ಮಾಸ್ಕ್ನಿಂದ ಮುಚ್ಚಿಕೊಳ್ಳಿ ಮತ್ತು ಮುಖ ಮಾಸ್ಕ್ ನಡುವೆ ಯಾವುದೇ ಅಂತರವಿರದಂತೆ ಎಚ್ಚರಿಕೆ ವಹಿಸಿರಿ.
ಧರಿಸಿರುವ ಮಾಸ್ಕ್ ಒದ್ದೆಯಾದ ಕೂಡಲೆ ಹೊಸದನ್ನು ಧರಿಸಿರಿ ಮತ್ತು ಒಂದು ಬಾರಿ ಬಳಸುವಂತವನ್ನು ಮರು ಬಳಕೆ ಮಾಡಬೇಡಿ. ಮಾಸ್ಕ್ ಅನ್ನು ಹಿಂದಿನಿಂದ ತೆಗೆಯಿರಿ, ಮುಚ್ಚಳವಿರುವ ಕಸದ ಬುಟ್ಟಿಯಲ್ಲಿ ಕೂಡಲೆ ವಿಲೇವಾರಿ ಮಾಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಲಹೆಗಳನ್ನು ನೀಡಿದೆ.







