ನಮ್ಮದು ಅವರಂತೆ ಡೋಂಗಿ ದೇಶಪ್ರೇಮವಲ್ಲ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಮಾ.7: ‘ಸಂವಿಧಾನ, ಪ್ರಜಾಪ್ರಭುತ್ವ ಗೌರವಿಸದ ಬಿಜೆಪಿಯವರು ನಿಜವಾದ ದೇಶದ್ರೋಹಿಗಳು. ಒಂದು ಕಡೆ ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಲೇ ಇನ್ನೊಂದು ಕಡೆ ದೇಶದ್ರೋಹದ ಕಾರ್ಯವನ್ನು ಮಾಡುತ್ತಾರೆ’ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ದೇಶದ ಬಡವರು, ಶೋಷಿತರು, ಮಹಿಳೆಯರು, ರೈತರ ಪರವಾಗಿರುವ ನಾವೇ ಭಾರತ ಮಾತೆಯ ನಿಜವಾದ ಮಕ್ಕಳು. ನಮ್ಮದು ಅವರಂತೆ ಡೋಂಗಿ ದೇಶಪ್ರೇಮವಲ್ಲ’ ಎಂದು ಲೇವಡಿ ಮಾಡಿದ್ದಾರೆ.
‘ಸಂವಿಧಾನದ ಪರವಾಗಿರುವವರು ಎಲ್ಲರೂ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದಾಗ ಮಾತ್ರ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಇಲ್ಲದಿದ್ದರೆ ಜಾತಿ, ಧರ್ಮಗಳ ಆಧಾರದಲ್ಲಿ ದೇಶ ಒಡೆದು, ಕೋಮುಗಲಭೆ, ಜನಾಂಗೀಯ ಘರ್ಷಣೆಗಳನ್ನು ಉಂಟುಮಾಡಿ, ಸರ್ವಜನಾಂಗದ ಶಾಂತಿಯ ತೋಟವಾದ ಭಾರತದ ಸಾಮರಸ್ಯವನ್ನು ಹಾಳುಮಾಡುತ್ತಾರೆ’ ಎಂದು ಅವರು ಎಚ್ಚರಿಸಿದ್ದಾರೆ.
‘1955ರಲ್ಲಿ ಭಾರತೀಯ ಪೌರತ್ವ ಕಾಯ್ದೆ ಜಾರಿಯಾದ ದಿನದಿಂದ ಇಂದಿನವರೆಗೆ ಈ ಕಾಯ್ದೆಗೆ 9 ತಿದ್ದುಪಡಿಗಳನ್ನು ಮಾಡಲಾಗಿದೆ. ಆ 9 ತಿದ್ದುಪಡಿಗಳಲ್ಲಿ ಯಾವೊಂದು ತಿದ್ದುಪಡಿಯೂ ಧರ್ಮವನ್ನು ಆಧರಿಸಿಲ್ಲ. ಈಗ ಬಿಜೆಪಿಯವರು ಮಾಡಿರುವ ತಿದ್ದುಪಡಿ ಧರ್ಮಾಧಾರಿತವಾಗಿದ್ದು, ಅದು ಸಂವಿಧಾನದ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ’ ಎಂದು ಸಿದ್ದರಾಮಯ್ಯ ದೂರಿದ್ದಾರೆ.







