ಕೈಗಾರಿಕಾ ವಲಯ ಭೂಪರಿವರ್ತನೆಗೆ ಎನ್‌ಓಸಿ ಉದ್ಯಾವರ ಗ್ರಾಪಂ ಎದುರು ಪ್ರತಿಭಟನೆ
ಉದ್ಯಾವರ, ಮಾ.7: ಉದ್ಯಾವರದಲ್ಲಿ ಮೀನು ಉತ್ಪನ್ನ ಕೈಗಾರಿಕಾ ಘಟಕವು ಮಾಡುತ್ತಿರುವ ಹಾನಿಯನ್ನು ಪರಿಗಣಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಕೈಗಾರಿಕೆಗೆ ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರ ನೀಡಬಾರೆಂದು ಉದ್ಯಾವರ ಗ್ರಾಪಂ ಹಾಗೂ ಗ್ರಾಮಸಭೆ ಕೈಗೊಂಡ ನಿರ್ಣಯವನ್ನು ಕಡೆಗಣಿಸಿ, ಉಡುಪಿ ಜಿಪಂ ಅಧ್ಯಕ್ಷರು ಆಸಕ್ತ ಉದ್ಯಮಿ ಯೊಬ್ಬರಿಗೆ ನೀಡಿರುವ ಕೈಗಾರಿಕಾ ವಲಯ ಭೂಪರಿವರ್ತನಾ ನಿರಾಪೇಕ್ಷಣಾ ಪತ್ರ ಇದೀಗ ವಿವಾದಕ್ಕೆ ಕಾರಣವಾಗಿದೆ.
ಗ್ರಾಮದ ಜನತೆಯ ಬದುಕಿಗೆ ಮಾರಕವಾಗುವ ಕೈಗಾರಿಕೆ ಪ್ರಾರಂಭಿಸಲು ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರ ನೀಡಿದ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸರ್ವಾಧಿಕಾರಿ ಮತ್ತು ಜನವಿರೋಧಿ ನಿಲುವನ್ನು ಖಂಡಿಸಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಆಶ್ರಯ ದಲ್ಲಿ ಮಾ.9ರ ಅಪರಾಹ್ನ 3 ಗಂಟೆಗೆ ಉದ್ಯಾವರ ಗ್ರಾಪಂ ಮುಂಭಾಗದಲ್ಲಿ ಸಾರ್ವಜನಿಕರು, ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರತಿಭಟನಾ ಸಮಿತಿ ಸಂಚಾಲಕ ಆನಂದ ಕೊರಂಗ್ರಪಾಡಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.





