ಯೆಸ್ ಬ್ಯಾಂಕ್ನ್ನು ರಕ್ಷಿಸಲು ಎಸ್ ಬಿಐಯಿಂದ ‘ವಿಲಕ್ಷಣ’ ಯೋಜನೆ: ಚಿದಂಬರಂ ವಾಗ್ದಾಳಿ

ಫೈಲ್ ಚಿತ್ರ
ಹೊಸದಿಲ್ಲಿ,ಮಾ.7: ಆರ್ಥಿಕ ಮುಗ್ಗಟ್ಟಿನಲ್ಲಿರುವ ಯೆಸ್ ಬ್ಯಾಂಕ್ನ್ನು ರಕ್ಷಿಸಲು ಎಸ್ಬಿಐ ರೂಪಿಸಿರುವ ಯೋಜನೆಯು ವಿಲಕ್ಷಣವಾಗಿದೆ ಎಂದು ಶನಿವಾರ ಇಲ್ಲಿ ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,2014ರಿಂದ ಯೆಸ್ ಬ್ಯಾಂಕಿನ ಸಾಲದ ಪ್ರಮಾಣದಲ್ಲಿ ವಾರ್ಷಿಕ ಶೇ.35ರಷ್ಟು ಜಿಗಿತಕ್ಕೆ ಅವಕಾಶ ನೀಡಿದ ಬೃಹತ್ ನಿಗಾ ವೈಫಲ್ಯಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿದರು.
ಪ್ರತಿ ಶೇರಿಗೆ 10 ರೂ.ನೀಡಿ ಶೂನ್ಯ ನಿವ್ವಳ ಮೌಲ್ಯದ ಬ್ಯಾಂಕ್ನ್ನು ಖರೀದಿಸುವ ಎಸ್ಬಿಐ ಯೋಜನೆಯು ವಿಲಕ್ಷಣವಾಗಿದೆ. ಎಸ್ಬಿಐ ಸ್ವಯಂ ಇಚ್ಛೆಯಿಂದ ಈ ರಕ್ಷಣಾ ಕ್ರಮಕ್ಕೆ ಮುಂದಾಗಿದೆ ಎಂದು ತನಗನ್ನಿಸುತ್ತಿಲ್ಲ. ಐಡಿಬಿಐ ಖರೀದಿಗೆ ಎಲ್ಐಸಿಯೂ ಸ್ವಯಂ ಇಚ್ಛೆಯಿಂದ ಮುಂದಾಗಿರಲಿಲ್ಲ. ಇವೆಲ್ಲ ಮೇಲಿನ ಆದೇಶದಂತೆ ನಡೆಯುತ್ತಿರುವ ಕಾರ್ಯಗಳಾಗಿವೆ ಎಂದು ಚಿದಂಬರಂ ಹೇಳಿದರು.
ಶುಕ್ರವಾರ ಯೆಸ್ ಬ್ಯಾಂಕಿನ ಪುನರ್ಘಟನೆ ಯೋಜನೆಯ ವಿವರಗಳನ್ನು ನೀಡಿದ ಸಂದರ್ಭ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿದಂಬರಂ ಅವರನ್ನು ‘ಸ್ವಯಂ ಘೋಷಿತ ಸಮರ್ಥ ವೈದ್ಯ’ ಎಂದು ಅಣಕಿಸಿದ್ದರಲ್ಲದೆ,ಅವರ ಸಾಧನೆಯನ್ನೂ ಪ್ರಶ್ನಿಸಿದ್ದರು.
ಶನಿವಾರ ಇದಕ್ಕೆ ಎದುರೇಟು ನೀಡಿದ ಚಿದಂಬರಂ,ಕೆಲವೊಮ್ಮೆ ವಿತ್ತಸಚಿವೆಯ ಮಾತುಗಳನ್ನು ಕೇಳಿದಾಗ ಈಗಲೂ ಯುಪಿಎ ಅಧಿಕಾರದಲ್ಲಿದೆ ಮತ್ತು ತಾನು ಈಗಲೂ ವಿತ್ತಸಚಿವನಾಗಿದ್ದೇನೆ ಮತ್ತು ಅವರು (ಸೀತಾರಾಮನ್) ಪ್ರತಿಪಕ್ಷದಲ್ಲಿದ್ದಾರೆ ಎಂದು ತನಗೆ ಅನಿಸುತ್ತದೆ ಎಂದರು.
ಯೆಸ್ ಬ್ಯಾಂಕ್ ಸಂಕಷ್ಟಕ್ಕೆ ಕೇಂದ್ರ ಸರಕಾರವೇ ಕಾರಣ ಎಂದು ಆರೋಪಿಸಿದ ಅವರು,ನೀವು ಕೆಟ್ಟದಾಗಿ ನಿರ್ವಹಿಸಿದರೆ ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟಿಗೆ ಸಿಲುಕುವುದು ಸಹಜವೇ ಆಗಿದೆ ಎಂದರು.







