10 ಕೋ.ರೂ.ಬ್ಯಾಂಕ್ ವಂಚನೆ ಆರೋಪಿ ಭಾರತಕ್ಕೆ ಗಡೀಪಾರು
ಹೊಸದಿಲ್ಲಿ,ಮಾ.7: ಹತ್ತು ಕೋಟಿ ರೂ.ವಂಚನೆ ಪ್ರಕರಣದ ಆರೋಪಿ ಸನ್ನಿ ಕಾಲ್ರಾನನ್ನು ಸಿಬಿಐ ಶನಿವಾರ ಓಮನ್‌ನ ಮಸ್ಕತ್‌ನಿಂದ ದಿಲ್ಲಿಗೆ ವಾಪಸ್ ಕರೆತಂದಿದೆ.
2018ರಲ್ಲಿ 13,500 ಕೋ.ರೂ.ಗಳ ಪಿಎನ್‌ಬಿ ಹಗರಣ ಬೆಳಕಿಗೆ ಬಂದ ನಂತರ ಇದು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಯಶಸ್ವಿ ಎರಡನೇ ಗಡಿಪಾರು ಕ್ರಮವಾಗಿದೆ. ಪಿಎನ್‌ಬಿ ಮತ್ತು ಕಾರ್ಪೊರೇಷನ್ ಬ್ಯಾಂಕಿಗೆ 40 ಕೋ.ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಿನಯ ಮಿತ್ತಲ್‌ನನ್ನು 2018,ಅಕ್ಟೋಬರ್‌ನಲ್ಲಿ ಸಿಂಗಾಪುರದಿಂದ ಭಾರತಕ್ಕೆ ಗಡಿಪಾರುಗೊಳಿಸಲಾಗಿತ್ತು.
2015,ಡಿಸೆಂಬರ್‌ನಲ್ಲಿ ಕಾಲ್ರಾ,ಆತ ನಿರ್ದೇಶಕನಾಗಿದ್ದ ವೈಟ್ ಟೈಗರ್ ಸ್ಟೀಲ್ಸ್ ಪ್ರೈ.ಲಿ.,ಕಾಲ್ರಾನ ಪತ್ನಿ ಮತ್ತು ಇತರ ಹಲವರ ವಿರುದ್ಧ ಬ್ಯಾಂಕ್ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಸಿಬಿಐ 2016,ಡಿ.22ರಂದು ಕಾಲ್ರಾ ದಂಪತಿ ಹಾಗೂ ಪಿಎನ್‌ಬಿಯ ಆಗಿನ ಚೀಫ್ ಮ್ಯಾನೇಜರ್,ಮ್ಯಾನೇಜರ್ ಮತ್ತು ಅಸಿಸ್ಟಂಟ್ ಜನರಲ್ ಮ್ಯಾನೇಜರ್ ವಿರುದ್ಧ ಆರೋಪಪಟ್ಟಿಯನ್ನು ದಾಖಲಿಸಿತ್ತು.
ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದಾಗಿನಿಂದ ಕಾಲ್ರಾ ದಂಪತಿ ತಲೆ ಮರೆಸಿಕೊಂಡಿದ್ದರು. ಕಾಲ್ರಾನ್ ಇರುವಿಕೆಯನ್ನು ಪತ್ತೆ ಹಚ್ಚಲು ಇಂಟರ್‌ಪೋಲ್ ನೆರವಾಗಿತ್ತು ಎಂದು ಸಿಬಿಐ ವಕ್ತಾರರು ತಿಳಿಸಿದರು.







