ದಾಖಲೆ ತೋರಿಸಲ್ಲ, ನನ್ನನ್ನೂ ಡಿಟೆನ್ಸನ್ ಕ್ಯಾಂಪ್ ಗೆ ಹಾಕುತ್ತೀರಾ?: ಮಾಜಿ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ಸಿಎಎ, ಎನ್‌ಆರ್‌ಸಿ, ಎನ್‍ಪಿಆರ್ ವಿರೋಧಿ ಸಮಾವೇಶ

ಚಿಕ್ಕಮಗಳೂರು, ಮಾ.7: ನನಗೆ ನನ್ನ ಹುಟ್ಟಿದ ದಿನಾಂಕವೇ ಗೊತ್ತಿಲ್ಲ. ಇನ್ನು ನನ್ನ ತಂದೆ-ತಾಯಿಯ ಬರ್ತ್ ಸರ್ಟಿಫಿಕೆಟ್ ಎಲ್ಲಿಂದ ತರಲಿ, ಎನ್‌ಆರ್‌ಸಿ ನೋಂದಣಿಗೆ ನನ್ನ ಬಳಿ ಯಾವ ದಾಖಲೆಗಳೂ ಇಲ್ಲ, ದಾಖಲೆ ತೋರಿಸುವುದೂ ಇಲ್ಲ, ನನ್ನನ್ನೂ ಡಿಟೆನ್ಸನ್ ಕ್ಯಾಂಪ್ ಗೆ ಹಾಕುತ್ತೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶನಿವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಸಂವಿಧಾನ ರಕ್ಷಣಾ ಸಮಿತಿ, ಜಾತ್ಯತೀತ ರಾಜಕೀಯ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಕಾಯ್ದೆ ವಿರೋಧಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ದೇಶದಲ್ಲಿ ಜಾರಿ ಮಾಡಲು ಸಾಧ್ಯವೇ ಇಲ್ಲ. ಕೇಂದ್ರ ಸರಕಾರದ ಈ ಕಾಯ್ದೆಯನ್ನು ಜಾರಿ ಮಾಡಲ್ಲ ಎಂದು ಈಗಾಗಲೇ ಹಲವು ರಾಜ್ಯಗಳು ಘೋಷಣೆ ಮಾಡಿದೆ. ಬಿಹಾರ ಸರಕಾರ ಹಾಗೂ ಆಂಧ್ರದ ಜಗನ್‍ಮೋಹನ್ ರೆಡ್ಡಿ ಸರಕಾರವೂ ಕೂಡ ಮೋದಿ ಅಮಿತ್ ಶಾ ಜಾರಿಗೆ ತಂದಿರುವ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳಿಕೆ ನೀಡಿವೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ, ಅಮಿತ್ ಶಾ ಅವರ ಈ ಕಾಯ್ದೆಗಳ ಜಾರಿ ದೇಶದಲ್ಲಿ ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
10 ವರ್ಷಗಳ ಹಿಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಿಎಎ ಜಾರಿ ಮಾಡಿತ್ತು. ಆದರೆ ಈ ಕಾಯ್ದೆ ಸಂವಿಧಾನದ ಜಾತ್ಯತೀತ ಆಶಯಗಳ ವಿರುದ್ಧವಾಗಿರಲಿಲ್ಲ, ಧರ್ಮಾಧಾರಿತವೂ ಆಗಿರಲಿಲ್ಲ. ಸದ್ಯ ಕೇಂದ್ರದ ಬಿಜೆಪಿ ಸರಕಾರ ಜಾರಿ ಮಾಡಿರುವ ಕಾಯ್ದೆ ಧರ್ಮದ ಆಧಾರದ ಮೇಲೆ ರೂಪಿತವಾದ ಕಾಯ್ದೆಯಾಗಿದ್ದು, ಇದು ಸಂವಿಧಾನದ ಜಾತ್ಯತೀತ ನಿಲುವಿಗೆ ವಿರುದ್ಧವಾಗಿದೆ ಎಂದರು. ಸಿಎಎ ಜಾರಿಗೆ ತರಲು ನಮ್ಮ ವಿರೋಧವಿಲ್ಲ, ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಧರ್ಮದ ಆಧಾರದ ಮೇಲೆ ಕಾಯ್ದೆಯನ್ನು ಜಾರಿ ಮಾಡುತ್ತಿರುವುದನ್ನು ವಿರೋಧಿಸುವುದು ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕೇಂದ್ರದ ಸಿಎಎ ಧರ್ಮ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುವ ಕಾಯ್ದೆಯಾಗಿದ್ದು, ಈ ಕಾರಣಕ್ಕೆ ಈ ಕಾಯ್ದೆಗಳನ್ನು ಸಾರಾಸಗಟಾಗಿ ವಿರೋಧಿಸುತ್ತಿದ್ದೇವೆ ಎಂದರು.
ಸಿಎಎ ದೇಶದಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾವ ಸಮುದಾಯದವರೂ ಆತಂಕ ಪಡುವ ಅಗತ್ಯವಿಲ್ಲ, ಆದರೆ ಕಾಯ್ದೆ ವಿರುದ್ಧ ಹೋರಾಟ ಮಾಡುವುದನ್ನು ನಿಲ್ಲಿಸಬಾರದು, ಬಿಜೆಪಿಯವರಿಗೆ ಮಾನ ಮರ್ಯಾದೆ ಎಂಬುದೇ ಇಲ್ಲ. ಅವರು ಭಂಡರು, ಯಾವಾಗ ಏನು ಮಾಡುತ್ತಾರೋ ತಿಳಿಯಲ್ಲ. ಆದ್ದರಿಂದ ಕೇಂದ್ರ ಸರಕಾರ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಬೇಕೆಂದು ಸಿದ್ದರಾಮಯ್ಯ ಇದೇ ವೇಳೆ ಕರೆ ನೀಡಿದರು.
ವಿಧಾನಸಭೆ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಸಮುದಾಯದ ಹೋರಾಟಗಾರರು ಮುಂಚೂಣಿಯಲ್ಲಿದ್ದು, ಬಲಿದಾನ ಮಾಡಿದ್ದಾರೆ. ಇಂತಹ ದೇಶಪ್ರೇಮಿಗಳನ್ನು ಈಗ ಧರ್ಮದ ಆಧಾರದ ಮೇಲೆ ಪೌರತ್ವದ ದಾಖಲೆ ಕೇಳುತ್ತ ಭಯದಲ್ಲಿ ನೂಕುವಂತಹ ಕಾನೂನನ್ನು ಕೇಂದ್ರ ಸರಕಾರ ಜಾರಿ ಮಾಡಿರುವುದು ವಿಪರ್ಯಾಸ. ಪೌರತ್ವ ನೀಡುವ ಕಾನೂನು ಈ ಹಿಂದೆಯೇ ದೇಶದಲ್ಲಿ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿದೆ. ಮದುವೆ ಆಗುವ ಮೂಲಕ, ಹುಟ್ಟಿನಿಂದಲೇ ಈ ದೇಶದ ಪೌರತ್ವ ಪಡೆಯುವ ಕಾನೂನು ಜಾರಿಯಲ್ಲಿದೆ. ಆದರೀಗ ಧರ್ಮದ ಆಧಾರದ ಮೇಲೆ ಪೌರತ್ವ ಸಾಬೀತು ಮಾಡಿ ಎಂದು ದಾಖಲೇ ಹೊಂದಿರದ ಅಲೆಮಾರಿಗಳು, ಆದಿವಾಸಿಗಳು, ಅನಕ್ಷರಸ್ಥರು, ಕಾರ್ಮಿಕರು, ಬಡವರು, ದೇವದಾಸಿಯವರು ಜೈಲಿಗೆ ಹೋಗಬೇಕಾ ಎಂದು ಅವರು ಪ್ರಶ್ನಿಸಿದರು.
ಸಿಪಿಐ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಮಾತನಾಡಿ, ಎಲ್ಲ ಧರ್ಮದವರಿಗೂ ಅವರದೇ ಆದ ಧರ್ಮ ಗ್ರಂಥಗಳಿವೆ, ಆದರೆ ಎಲ್ಲ ಧರ್ಮದವರಿಗೂ ಇರುವ ಒಂದು ಧರ್ಮ ಗ್ರಂಥವೆಂದರೆ ಅದು ಸಂವಿಧಾನವಾಗಿದೆ. ಹಿಂದೆ ಮನುಸ್ಮೃತಿ ಮೂಲಕ ಜನರನ್ನು ಒಡೆದಾಳಿ ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯ, ಪಂಕ್ತಿಬೇಧ ಮಾಡಿದವರು ಇದೀಗ ಧರ್ಮದ ಆಧರಿತವಾಗಿರುವ ಸಿಎಎ, ಎನ್‌ಆರ್‌ಸಿ, ಎನ್‍ಪಿಆರ್ ಕಾಯ್ದೆಗಳನ್ನು ಜಾರಿ ಮಾಡಿ ಪೌರತ್ವ ಬೇಧ ಮಾಡುತ್ತಿದ್ದಾರೆ. ಧರ್ಮಧಾರಿತ ಪೌರತ್ವ ಹಿಂದೆಂದೂ ಜಾರಿಯಾಗಿಲ್ಲ. ಅದಕ್ಕೆ ಅವಕಾಶವೇ ಇಲ್ಲ, ಈ ಕಾರಣಕ್ಕೆ ಶ್ರೀಲಂಕಾ, ಟಿಬೆಟ್‍ನಿಂದ ವಲಸೆ ಬಂದವರಿಗೂ ಇಲ್ಲಿ ಪೌರತ್ವ ನೀಡಲಾಗಿದೆ. ಕೇಂದ್ರ ಸರಕಾರ ಧರ್ಮದ ಆಧಾರದ ಮೇಲೆ ಪೌರತ್ವ ನಿಗದಿ ಮಾಡಿರುವುದು ರಾಜಕೀಯ ಲಾಭದ ಹುನ್ನಾರದಿಂದ ಎಂದರು.
ಸಿಪಿಎಂ ಪಕ್ಷದ ರಾಜ್ಯ ಸಂಚಾಲಕ ಕೆ.ಪ್ರಕಾಶ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿ ದೇಶ ಕಟ್ಟಲು ಮುಸ್ಲಿಮರ ಹುತಾತ್ಮರಾಗಿದ್ದಾರೆ. ಆಗ ಬ್ರಿಟಿಷರೊಂದಿಗೆ ಸಹಕಾರ ನೀಡಿದ್ದವರು ಇಂದು ದೇಶ ನಿಮ್ಮದಲ್ಲ ಎಂದು ಹೇಳುತ್ತಿದ್ದಾರೆ. ಎಪ್ರಿಲ್ 1ರಿಂದ ದೇಶದಲ್ಲಿ ಪೌರತ್ವ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತಿದ್ದು, ರಾಜ್ಯದಲ್ಲಿ ಎಪ್ರಿಲ್ 15ರಿಂದ ಆರಂಭವಾಗುತ್ತದೆ ಎಂಬ ಮಾಹಿತಿ ಇದೆ. ಈ ವೇಳೆ ಪೂರ್ವಜರ ದಾಖಲೆಗಳನ್ನು ಕೇಳಲಾಗುತ್ತದೆ ಎಂದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದು ಮುಸ್ಲಿಂಮರು ಒಗ್ಗೂಡಿದ್ದರಿಂದ ಬ್ರಿಟಿಷರಿಗೆ ಭಯ ಉಂಟಾಗಿತ್ತು. ಆಗ ಅವರು ಒಡೆದಾಳುವ ನೀತಿಯನ್ನು ಜಾರಿ ಮಾಡಿದ್ದರು. ಅಂದು ಅವರೊಂದಿಗಿದ್ದ ಆರೆಸ್ಸೆಸ್‍ನವರು ಅದೆ ನೀತಿಯನ್ನು ಅಧಿಕಾರದ ಆಸೆಗಾಗಿ ಸಿಎಎ, ಎನ್‌ಆರ್‌ಸಿ ಮೂಲಕ ಒಡೆದಾಳಲು ಮುಂದಾಗಿದ್ದಾರೆ. ಪೌರತ್ವ ಹಿಂದೆ ಧರ್ಮ ನಿರಪೇಕ್ಷವಾಗಿತ್ತು. ಇಂದು ಧರ್ಮ ಆಧರಿತವಾಗಿದೆ ಎಂದು ಆರೋಪಿಸಿದರು.
ಸಂವಿಧಾನ ರಕ್ಷಣಾ ಸಮಿತಿ ಮುಖಂಡರಾದ ಶರೀಫ್ ಶಾಖಾದ್ರಿ, ಅಸ್ಗರ್ ಅಲಿ, ಅಬ್ದುಲ್ ಘನಿ, ಪಿಎಫ್‍ಐನ ಶರೀಫ್ ಬೆಳ್ಳಾರೆ, ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ, ಬಿಎಸ್ಪಿ ಮುಖಂಡ ಪರಮೇಶ್, ಮಾಜಿ ಸಚಿವರಾದ ಮೋಟಮ್ಮ, ಸಗೀರ್ ಅಹ್ಮದ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮತ್ತಿತರರ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ಓದಿ ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಶಾಸಕ ರಾಜೇಗೌಡ, ಮಾಜಿ ಶಾಸಕರಾದ ಐ.ಬಿ.ಶಂಕರ್, ತರೀಕೆರೆ ಶ್ರೀನಿವಾಸ್, ವಿವಿಧ ಪಕ್ಷಗಳ ಮುಖಂಡರಾದ ಎಂ.ಎಲ್.ಮೂರ್ತಿ, ಗಾಯತ್ರಿ ಶಾಂತೇಗೌಡ, ರಾಧಾ ಸುಂದರೇಶ್, ರಾಧಾಕೃಷ್ಣ, ರೇಖಾಹುಲಿಯಪ್ಪಗೌಡ ಮತ್ತಿತರರು ಸಮಾವೇಶದಲ್ಲಿ ಉಪಸ್ಥಿತರಿದ್ದರು.
ಸಂವಿಧಾನದ 5ನೇ ವಿಧಿಯಿಂದ 11ನೇ ವಿಧಿವರೆಗೆ ಪೌರತ್ವದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅಧಿಕಾರಕ್ಕೆ ಬರುವ ಯಾವುದೇ ಸರಕಾರಗಳು ಈ ವಿಧಿಗಳ ಆಧಾರದ ಮೇಲೆಯೇ ಸಿಎಎಗಳನ್ನು ಜಾರಿ ಮಾಡಬೇಕು. 1955ರಲ್ಲಿ ನಾಗರಿಕ ಪೌರತ್ವ ಕಾಯ್ದೆ ಜಾರಿಯಾಗಿದ್ದು, ಇದಕ್ಕೆ ಇದುವರೆಗೆ 9 ಬಾರಿ ತಿದ್ದುಪಡಿಯಾಗಿದೆ. ಆದರೆ ಯಾವ ತಿದ್ದುಪಡಿಯೂ ಧರ್ಮ, ಜಾತಿ ಆಧರಿಸಿ ತಿದ್ದುಪಡಿ ಮಾಡಿಲ್ಲ. ಆದರೆ ಕೇಂದ್ರ ಸರಕಾರ 2019ರ ಡಿಸೆಂಬರ್ ನಲ್ಲಿ ಮಾಡಿದ 10ನೇ ಪೌರತ್ವ ತಿದ್ದುಪಡಿಯಲ್ಲಿ ಧರ್ಮವನ್ನು ಬೆರೆಸಿದ್ದಾರೆ. ಇದು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನವಾಗಿದ್ದು, ಬಿಜೆಪಿಯವರಿಗೆ ಧರ್ಮದ ಮೇಲೆ ಮಾತ್ರ ನಂಬಿಕೆ ಇದೆ, ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎನ್ನುವುದುಕ್ಕೆ ಇದೇ ಸಾಕ್ಷಿಯಾಗಿದೆ.
- ಸಿದ್ದರಾಮಯ್ಯ, ಮಾಜಿ ಸಿಎಂಬಿಜೆಪಿಯವರ ಬದುಕೇ ದಾರಿ ತಪ್ಪಿಸುವುದಾಗಿದ್ದು, ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಮಾತ್ರವಲ್ಲದೇ ಎಲ್ಲ ಹಿಂದೂಗಳೂ ತೊಂದರೆ ಅನುಭವಿಸಲೇ ಬೇಕು. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ. ಪೌರತ್ವ ನೋಂದಣಿಗೆ ಬರುವವರಿಗೆ ಯಾವುದೇ ದಾಖಲೆ ತೋರಿಸಬೇಡಿ, ಯಾವ ತೊಂದರೆಯೂ ಆಗಲ್ಲ. ಸಿಎಎ ವಿರುದ್ಧ ಮಾತನಾಡುವವರನ್ನು ಹೆದರಿಸಲಾಗುತ್ತಿದೆ. ನಾಟಕ ಮಾಡುವ, ಕವನ ಹೇಳುವ, ಘೋಷಣೆ ಕೂಗುವವರ ಮೇಲೂ ದೇಶದ್ರೋಹದ ಕೇಸ್‍ಗಳನ್ನು ಹಾಕಿ ಬೆದರಿಸಲಾಗುತ್ತಿದೆ. ಆದರೆ ಇಂತಹ ಹೋರಾಟ, ಘೋಷಣೆಗಳು ದೇಶದ್ರೋಹವಲ್ಲ ಎಂದು ನ್ಯಾಯಾಲಯವೇ ತೀರ್ಪು ನೀಡಿರುವುದು ಶಾಹೀನ್ ಶಾಲೆಯ ಪ್ರಕರಣದಿಂದ ಸಾಬೀತಾಗಿದ್ದು, ಸಂವಿಧಾನಕ್ಕೆ ಬದ್ಧವಾಗಿರುವವರೆಲ್ಲ ದೇಶಪ್ರೇಮಿಗಳು, ಸಂವಿಧಾನವನ್ನು ವಿರೋಧಿಸುವುವವರು ದೇಶದ್ರೋಹಿಗಳು.
- ಸಿದ್ದರಾಮಯ್ಯ, ಮಾಜಿ ಸಿಎಂ
ಚಿಕ್ಕಮಗಳೂರು ನಗರದ ಸೇರಿದಂತೆ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು, ನಾಗರಿಕರು ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶದಲ್ಲಿ ಕಿಕ್ಕಿರಿದು ನೆರದಿದ್ದ ಜನರ ಮಧ್ಯೆ ರಾಷ್ಟ್ರಧ್ವಜ ಅಲ್ಲಲ್ಲಿ ಹಾರಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಸಮಾವೇಶ ನಡೆಯುತ್ತಿದ್ದ ವೇಳೆ ಆಗಾಗ್ಗೆ ಆಝಾದಿ ಘೋಷಣೆಗಳೂ ಕೇಳಿ ಬಂದವು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಆಗಮಿಸಿದ್ದರು. ಅವರು ವೇದಿಕೆ ಏರುತ್ತಿದ್ದಂತೆ ಘೋಷಣೆಗಳು, ಜೈಕಾರ ಮುಗಿಲು ಮುಟ್ಟಿದ್ದವು. ಕಾರ್ಯಕ್ರಮದ ಕೊನೆಯಲ್ಲಿ ಅವರ ಭಾಷಣ ನಿಗದಿಯಾಗಿದ್ದರಿಂದ ಸಮಾವೇಶಕ್ಕೆ ಆಗಮಿಸಿದ್ದ ಜನರು ಸಿದ್ದರಾಮಯ್ಯ ಅವರ ಮಾತು ಕೇಳುವ ಸಲುವಾಗಿ ಸಂಜೆಯಾದರೂ ಆಸನ ಬಿಟ್ಟು ಕದಲಲಿಲ್ಲ. ಸಿದ್ದರಾಮಯ್ಯ ಮಾತನಾಡಲು ತೊಡಗುತ್ತಿದ್ದಂತೆ ಸಭೆಯಲ್ಲಿ ಭಾರೀ ಚಪ್ಪಾಳೆ ಸದ್ದು ಕೇಳಿ ಬಂತು. ಅವರು ಭಾಷಣ ಮಾಡುತ್ತಿದ್ದ ವೇಳೆ ಆಗಾಗ್ಗೆ ಸಭೆಯಲ್ಲಿ 'ಹೌದು ಹುಲಿಯಾ' ಕೂಗೂ ಕೇಳಿಬಂತು. ಇದನ್ನು ಸ್ವತಃ ಸಿದ್ದರಾಮಯ್ಯ ಮುಗುಳ್ನಕ್ಕು ಸ್ವಾಗತಿಸಿದರು.










