ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ರಾಯಭಾರಿಯಾಗಿ ಪುನೀತ್ ರಾಜ್‌ಕುಮಾರ್ ನೇಮಕ

ಬೆಂಗಳೂರು, ಮಾ.7: ರಾಜ್ಯದ ಗಡಿಭಾಗದ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಚಿತ್ರನಟ ಪುನೀತ್ ರಾಜ್‌ಕುಮಾರ್ ಕಾರ್ಯನಿರ್ವಹಿಸಲಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆಯವರೆ ಆದ ಪುನೀತ್ ರಾಜ್‌ಕುಮಾರ್‌ರನ್ನು ಶನಿವಾರ ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಭೇಟಿಯಾಗಿ ಚಾಮರಾಜನಗರ ಜಿಲ್ಲಾಡಳಿತದ ಪರವಾಗಿ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್, ಚಾಮರಾಜನಗರ ಜಿಲ್ಲೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಚಾಮರಾಜನಗರ ಜಿಲ್ಲೆ ಜೀವಂತ ಸಂಸ್ಕೃತಿಗೆ ಹೆಸರಾಗಿದೆ ಎಂದರು.
ಸಿದ್ಧ ಪುರುಷರ ನಾಡು ಹಾಗೂ ಜಾನಪದ ಕಲೆಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ. ಇದು ಆರಂಭದ ಹೆಜ್ಜೆ ಎಂದು ಅವರು ಹೇಳಿದರು.
ಚಾಮರಾಜನಗರ ಜಿಲ್ಲೆ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುವಂತೆ ಸಮಗ್ರ ಅಭಿವೃದ್ಧಿಯೊಂದಿಗೆ ಜಿಲ್ಲೆಯನ್ನು ಚಂದಗಾಣಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯು ತ್ವರಿತವಾಗಿ ಅಭಿವದ್ಧಿ ಹೊಂದುತ್ತಿದ್ದು, ಪುನೀತ್ ರಾಜ್‌ಕುಮಾರ್ ಅಭಿವೃದ್ಧಿ ರಾಯಭಾರಿಯಾಗಿ ಸೇವೆ ಸಲ್ಲಿಸುವುದರಿಂದ ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಇತರೆ ಕ್ಷೇತ್ರಗಳ ಪ್ರಗತಿಯಾಗಿ ಜಿಲ್ಲೆಯ ಅಭಿವೃದ್ಧಿಯ ವೇಗ ಇನ್ನೂ ಹೆಚ್ಚಾಗಲಿದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ ಪುನೀತ್ ರಾಜ್‌ಕುಮಾರ್ ಮಾತನಾಡಿ, ನನ್ನ ತಂದೆ ಡಾ.ರಾಜ್‌ಕುಮಾರ್ ಹುಟ್ಟಿ ಬೆಳೆದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಕೆಲಸ ಮಾಡುವುದು ನಿಜಕ್ಕೂ ನನ್ನ ಸೌಭಾಗ್ಯವೆಂದೆ ಭಾವಿಸಿದ್ದೇನೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳು ಅಭಿವೃದ್ಧಿಯಾಗಿ ರಾಜ್ಯ ಪೂರ್ಣ ಅಭಿವೃದ್ಧಿಯಾಗಬೇಕಿದ್ದು, ಚಾಮರಾಜನಗರ ಜಿಲ್ಲೆಯೊಂದಿಗೆ ನಮ್ಮದು ಭಾವನಾತ್ಮಕ ಸಂಬಂಧವಾಗಿದೆ. ನಮ್ಮ ತಂದೆ ಡಾ.ರಾಜ್‌ಕುಮಾರ್ ಸ್ಮರಣೆ ಅಂಗವಾಗಿ ಚಾಮರಾಜನಗರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸುವ ಉದ್ದೇಶವಿದೆ ಎಂದು ಪುನೀತ್ ರಾಜ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







