ಇನ್ನೆರಡು ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ: ಈಶ್ವರ್ ಖಂಡ್ರೆ

ಬೆಂಗಳೂರು, ಮಾ. 7: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೊಸದಿಲ್ಲಿಯಲ್ಲಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ನಗರದ ಗುರುನಾನಕ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಜಾಲತಾಣದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅತಂತ್ರ ಪರಿಸ್ಥಿತಿಯಲ್ಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕೆಂದು ಕೋರಲಾಗಿದೆ ಎಂದರು.
ದಿನೇಶ್ ಗುಂಡೂರಾವ್ ಅವರನ್ನೇ ಮುಂದುವರೆಸಲಿ ಅಥವಾ ಹೊಸ ಅಧ್ಯಕ್ಷರನ್ನು ನೇಮಿಸಲಿ. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದ ಅವರು, ಇನ್ನೆರಡು ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಕ್ಕಿ ಕಡಿತ ಸಲ್ಲ: ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿದ್ದ ಅತ್ಯಂತ ಜನಪ್ರಿಯ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ನೀಡುತ್ತಿದ್ದ ಅಕ್ಕಿ ಕಡಿತ ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಕಾಂಗ್ರೆಸ್ ಸರಕಾರ ರೂಪಿಸಿದ ಯೋಜನೆ ಎಂದು ರಾಜ್ಯ ಸರಕಾರ ತಾತ್ಸಾರ ಮಾಡುತ್ತಿದೆ ಎಂದು ದೂರಿದರು.
ಅನ್ನಭಾಗ್ಯ ಅಕ್ಕಿ ಕಡಿತ ಸಂಬಂಧ ಸದನದಲ್ಲಿ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ. ಅಕ್ಕಿ ಬದಲಿಗೆ ರಾಗಿ, ಜೋಳ ಬೇಕಾದರೆ ನೀಡಲಿ. ಅದನ್ನು ಬಿಟ್ಟು ಆಹಾರ ಪ್ರಮಾಣವನ್ನು ಕಡಿತ ಮಾಡುವುದು ಸಲ್ಲ. ಸರಕಾರ ಆರ್ಥಿಕ ತೊಂದರೆಯಲ್ಲಿದ್ದು, ಒಂದೊಂದೇ ಜನಪರ ಯೋಜನೆಗಳನ್ನು ಕೈಬಿಡುತ್ತಿದೆ ಎಂದು ಟೀಕಿಸಿದರು.







