ನಾಳೆ ಮಹಿಳಾ ಟ್ವೆಂಟಿ-20 ವಿಶ್ವ ಕಪ್ ಫೈನಲ್
ಅಜೇಯ ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯದ ಕಠಿಣ ಸವಾಲು

ಮೆಲ್ಬೋರ್ನ್, ಮಾ.7: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ರವಿವಾರ ನಡೆಯಲಿರುವ ವನಿತೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಹಾಗೂ ಟೂರ್ನಿಯಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ಭಾರತ ಪ್ರಶಸ್ತಿ ಗೆಲುವಿಗಾಗಿ ಕಾದಾಟ ನಡೆಸಲಿವೆ.
ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ಸಹಿತ ಗ್ರೂಪ್ ಹಂತದ ಎಲ್ಲ ನಾಲ್ಕು ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿ ಒಟ್ಟು 8 ಅಂಕ ಗಳಿಸಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯ ಒಂದೂ ಎಸೆತ ಕಾಣದೇ ರದ್ದುಗೊಂಡಾಗ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದ್ದ ಹರ್ಮನ್‌ಪ್ರೀತ್ ಕೌರ್ ಬಳಗ ಫೈನಲ್‌ಗೆ ಅರ್ಹತೆ ಪಡೆದಿತ್ತು. 16ರ ಹರೆಯದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ ಬೌಲರ್‌ಗಳು ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಭಾರತ ಚೊಚ್ಚಲ ವಿಶ್ವಕಪ್ ಜಯಿಸಬೇಕಾದರೆ ಸ್ಟಾರ್ ಬ್ಯಾಟ್ಸ್‌ವುಮನ್‌ಗಳಾದ ಸ್ಮತಿ ಮಂಧಾನ ಹಾಗೂ ಹರ್ಮನ್‌ಪ್ರೀತ್ ಕೌರ್ ಸಿಡಿದೇಳಬೇಕಾದ ಅಗತ್ಯವಿದೆ. ಮಧ್ಯಮ ಕ್ರಮಾಂಕದ ಆಟಗಾರ್ತಿಯರು ಉಪಯುಕ್ತ ಕೊಡುಗೆ ನೀಡಬೇಕಾಗಿದೆ. ಆಸ್ಟ್ರೇಲಿಯ ತಂಡ ಇತ್ತೀಚೆಗೆ ತ್ರಿಕೋನ ಸರಣಿ ಫೈನಲ್‌ನಲ್ಲಿ ಭಾರತಕ್ಕೆ ಸೋಲುಣಿಸಿತ್ತು. ತನ್ನ ತವರು ಮೈದಾನದಲ್ಲಿ ಸತತ ಆರನೇ ಬಾರಿ ಫೈನಲ್ ತಲುಪಿರುವ ಆಸ್ಟ್ರೇಲಿಯ ಐದನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಅತ್ಯಂತ ಒತ್ತಡದ ಪಂದ್ಯಗಳಲ್ಲಿ ಪ್ರಮುಖ ಪಂದ್ಯವನ್ನು ಹೇಗೆ ಗೆಲ್ಲಬೇಕೆನ್ನುವುದನ್ನು ಆಸ್ಟ್ರೇಲಿಯ ಚೆನ್ನಾಗಿ ಕರಗತ ಮಾಡಿಕೊಂಡಿದೆ. ಪ್ರವಾಸಿ ಭಾರತ ತಂಡ 2017ರ ಏಕದಿನ ವಿಶ್ವಕಪ್ ಫೈನಲ್ ಹಾಗೂ 2018ರ ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಎಡವಿದ ಇತಿಹಾಸವಿದೆ.
ಭಾರತ ತಂಡ ಶೆಫಾಲಿ ವರ್ಮಾರಿಂದ ಮತ್ತೊಂದು ಬಿರುಸಿನ ಆರಂಭವನ್ನು ಎದುರು ನೋಡುತ್ತಿದೆ. ಹಿರಿಯ ಆಟಗಾರ್ತಿ ಮಂಧಾನ ಕೂಡ ದೊಡ್ಡ ಕೊಡುಗೆ ನೀಡುವ ವಿಶ್ವಾಸದಲ್ಲಿದ್ದಾರೆ. ಮತ್ತೆ ಮೊದಲಿನ ಲಯಕ್ಕೆ ಮರಳಲು ಹರ್ಮನ್‌ಪ್ರೀತ್‌ಗೆ ಇದು ಮಹತ್ವದ ವೇದಿಕೆಯಾಗಿದೆ.
ಶೆಫಾಲಿಯ ಕೊಡುಗೆಯಿಂದಾಗಿಯೇ ಭಾರತ ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಗಿದೆ. ಗ್ರೂಪ್ ಹಂತದಲ್ಲಿ ಭಾರತ 150 ರನ್‌ಗಿಂತ ಹೆಚ್ಚು ಸ್ಕೋರ್ ಗಳಿಸಿಲ್ಲ. ಆದಾಗ್ಯೂ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಗೆಲುವಿನ ನಗೆ ಬೀರಿತ್ತು.
ಬೆರಳುನೋವಿನಿಂದ ಚೇತರಿಸಿ ಕೊಂಡಿರುವ ಲೆಗ್ ಸ್ಪಿನ್ನರ್ ಪೂನಂ ಯಾದವ್ ಟೂರ್ನಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿ ಆಸ್ಟ್ರೇಲಿಯದ ವೇಗದ ಬೌಲರ್ ಮೆಗಾನ್ ಶುಟ್ ಜೊತೆಗೆ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ವೇಗದ ಬೌಲರ್ ಶಿಖಾ ಪಾಂಡೆ ಕೂಡ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ಸ್ಪಿನ್ ಜೋಡಿಗಳಾದ ರಾಧಾ ಯಾದವ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ಬಿಗಿ ಬೌಲಿಂಗ್‌ನ ಮೂಲಕ ಮಿಂಚುತ್ತಿದ್ದಾರೆ.
75,000ಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದ್ದು, 90,000 ಪ್ರೇಕ್ಷಕರು ಫೈನಲ್ ಪಂದ್ಯವನ್ನು ವೀಕ್ಷಿಸುವ ಮೂಲಕ ಮಹಿಳಾ ಕ್ರಿಕೆಟ್ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಆಸ್ಟ್ರೇಲಿಯ ತಂಡವನ್ನು ಮೆಗ್ ಲ್ಯಾನ್ನಿಂಗ್ ನಾಯಕಿಯಾಗಿ ಮುನ್ನಡೆಸುತ್ತಿದ್ದಾರೆ. ತವರು ಪ್ರೇಕ್ಷಕರ ಬೆಂಬಲದೊಂದಿಗೆ ತಂಡಕ್ಕೆ ಮತ್ತೊಂದು ವಿಶ್ವಕಪ್ ಗೆದ್ದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿರುವ ಆಸ್ಟ್ರೇಲಿಯದ ಪುರುಷರ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ತನ್ನ ಪತ್ನಿ ಅಲಿಸ್ಸಾ ಹೀಲಿ ಜೊತೆಗೆ ಫೈನಲ್ ಪಂದ್ಯ ವೀಕ್ಷಿಸಲಿದ್ದಾರೆ.
ಆಸ್ಟ್ರೇಲಿಯಕ್ಕೆ ಗಾಯದ ಸಮಸ್ಯೆ ಎದುರಾಗಿದ್ದು, ವೇಗಿ ಟೈಯ್ಲೆ ವ್ಲಾಮ್ನಿಕ್ ಟೂರ್ನಿಯ ಆರಂಭದಲ್ಲಿ ಹೊರಗುಳಿದರೆ, ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ದ.ಆಫ್ರಿಕಾ ವಿರುದ್ಧ ಸೆಮಿ ಫೈನಲ್ ಪಂದ್ಯಕ್ಕೆ ಮೊದಲೇ ಟೂರ್ನಿಯಿಂದ ಹೊರಗುಳಿದಿದ್ದರು. ಪ್ರಮುಖ ಆಟಗಾರ್ತಿಯರ ಅನುಪಸ್ಥಿತಿಯಲ್ಲೂ ಆಸೀಸ್ ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.







