ಭಾರತ- ಆಸ್ಟ್ರೇಲಿಯ ತಂಡಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ

ಹೊಸದಿಲ್ಲಿ, ಮಾ.7: ಮಹಿಳಾ ಟ್ವೆಂಟಿ-20 ವಿಶ್ವಕಪ್ ಫೈನಲ್‌ನ ಮುನ್ನಾ ದಿನವಾದ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ತಂಡಗಳಿಗೆ ಶುಭಾಶಯ ಕೋರಿದ್ದಾರೆ.
ಆಸ್ಟ್ರೇಲಿಯದ ಪ್ರಧಾನಮಂತ್ರಿ ಸ್ಕಾಟ್ ಮೊರಿಸನ್ ಅವರ ಟ್ವೀಟ್‌ಗೆ ಮೋದಿ ಮರು ಟ್ವೀಟ್ ಮಾಡಿದರು. ನಾಳೆಯ ಭಾರತ ಹಾಗೂ ಆಸ್ಟ್ರೇಲಿಯ ಮಹಿಳಾ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಸಿಸಿಐ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯದ ಮಹಿಳಾ ತಂಡ ಎರಡಕ್ಕೂ ಶುಭಾಶಯ ಕೋರುವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ‘‘ಅತ್ಯುತ್ತಮ ತಂಡ ಗೆಲ್ಲಲಿ. ನೀಲಿ ಬೆಟ್ಟದಂತೆ ಎಂಸಿಜಿ ಕೂಡ ನಾಳೆ ನೀಲಿಬಣ್ಣದ್ದಾಗಿರುತ್ತದೆ’’ಎಂದು ಮೋದಿ ಟ್ವೀಟಿಸಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಮೊರಿಸನ್,‘‘ಹಾಯ್, ನರೇಂದ್ರ ಮೋದಿ-ನಾಳೆ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ-ಭಾರತ ಮಹಿಳಾ ಟ್ವೆಂಟಿ-20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಎಂಸಿಜಿಯ ಬೃಹತ್ ಸಂಖ್ಯೆಯ ಪ್ರೇಕ್ಷಕರ ಎದುರು ಎರಡು ಶ್ರೇಷ್ಠ ತಂಡಗಳು ಸೆಣಸಾಡಲಿವೆ. ಇದೊಂದು ಅದ್ಭುತ ಪಂದ್ಯವಾಗಲಿದೆ. ಎಲ್ಲ ರೀತಿಯಲ್ಲೂ ಆಸ್ಟ್ರೇಲಿಯವೇ ಫೇವರಿಟ್’’ ಎಂದು ಟ್ವೀಟ್ ಮಾಡಿದ್ದರು.





