ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಹೈದರಾಬಾದ್‍ನ ಸ್ತ್ರೀವಾದಿ ಚಿಂತಕಿ ವೋಲ್ಗಾ
ಮಂಡ್ಯ: 'ಮಹಿಳಾ ಬದುಕು ಪಲ್ಲಟಗಳು' ಕುರಿತು ವಿಚಾರ ಸಂಕಿರಣ

ಮಂಡ್ಯ, ಮಾ.7: ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ಎಲ್ಲ ಮಹಿಳೆಯರು ಸಂಘಟಿತ ಹೋರಾಟ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೈದರಾಬಾದ್‍ನ್ ಸ್ತ್ರೀವಾದಿ ಲೇಖಕಿ ಮತ್ತು ಹೋರಾಟಗಾರ್ತಿ ವೋಲ್ಗಾ ಕರೆ ನೀಡಿದ್ದಾರೆ.
ಅಕ್ಕಮಹಾದೇವಿ ಮಹಿಳಾ ವಿವಿಯ ಮಂಡ್ಯ ಸ್ತಾನಕೋತ್ತರ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಬದುಕು ಪಲ್ಲಟಗಳು ಕುರಿತು ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇಡೀ ಸಮಾಜ ಪುರುಷ ಪ್ರಧಾನ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಪ್ರತಿಯೊಂದರ ಮೇಲೂ ಪಿತೃ ಸಂಸ್ಕೃತಿ ಸವಾರಿ ಮಾಡುತ್ತಿದೆ. ಅದಕ್ಕೆ ಜಾತಿ, ಮತ, ಧರ್ಮ ಬೇಧವಿಲ್ಲ. ಮುಖ್ಯವಾಗಿ ಮಹಿಳೆಯರ ಶೋಷಣೆಗೆ ಈ ಪಿತೃ ಪ್ರಧಾನ ಸಂಸ್ಕೃತಿಯೇ ಪ್ರಮುಖ ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಇಂದು ಮಹಿಳೆಯರಿಗೆ ಶಿಕ್ಷಣ ದೊರೆಯುತ್ತಿದೆ. ಉನ್ನತಮಟ್ಟದ ಹುದ್ದೆಗಳನ್ನು ಅಲಂಕಿಸುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೀಗಿದ್ದರೂ ಆಕೆಯ ಶೋಷಣೆ ಮಾತ್ರ ನಿಂತಿಲ್ಲ. ಮಹಿಳೆಯರು ಸಮಾಜಕ್ಕೆ ತೆರೆದುಕೊಳ್ಳಬೇಕು. ಅನ್ಯಾಯದ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಅವರು ಸಲಹೆ ನೀಡಿದರು.
ಮಹಿಳೆಯರು ಹೋರಾಟದಲ್ಲಿ ಚಾರಿತ್ರಿಕ ಏಳುಬೀಳುಗಳನ್ನು ಅನುಭವಿಸಿದ್ದಾರೆ. ಈ ಹೋರಾಟಗಳಿಂದ ಮಹಿಳೆಯರು ಸಾಕಷ್ಟು ಸಬಲರಾಗುತ್ತಿದ್ದಾರೆ. ಶಿಕ್ಷಣ ಅವರ ಅರಿವಿನ ವಿಸ್ತಾರವನ್ನು ಹೆಚ್ಚಿಸಿದೆ. ಶಿಕ್ಷಣದ ಹಕ್ಕಿನಷ್ಟೇ ಹೋರಾಟದ ಹಕ್ಕು ತನ್ನದೆಂದು ಮನಗಾಣಬೇಕು. ದೌರ್ಜನ್ಯದ ವಿರುದ್ಧ ದನಿ ಎತ್ತದಿದ್ದರೆ ಎಷ್ಟು ಓದಿದರೂ ಪ್ರಯೋಜನಕ್ಕೆ ಬಾರದು ಎಂದು ಅವರು ಕಿವಿಮಾತು ಹೇಳಿದರು.
ಪೋಷಕರು ಹೆಣ್ಣು ಮಕ್ಕಳಿಗೂ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ಅವರ ಚಲನವಲನ ಗಮನಿಸುವ ಜತೆಗೆ, ಅವರಲ್ಲಿ ಅನ್ಯಾಯ, ದೌರ್ಜನ್ಯಗಳ ವಿರುದ್ಧ ಹೋರಾಟದ ಮನೋಭಾವ ಮೂಡಿಸಬೇಕು. ಇದರ ಜತೆಗೆ, ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿ, ‘ಹೆಣ್ಣೋಟದ ಹೆಗ್ಗಳಿಕೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ಸಬೀಹಾ ಭೂಮಿಗೌಡ, 2012ರ ನಿರ್ಭಯ ಪ್ರಕರಣ ಮತ್ತು ಅದಕ್ಕೂ ಮುಂಚೆ ಮಂಗಳೂರಿನ ಹೋಮ್‍ಸ್ಟೇ ಮೇಲೆ ಅಮಾನುಷ ದಾಳಿಗೆ ವಿರುದ್ಧವಾಗಿ ನಾವು ಮಾರ್ಚ್ 2013ರಲ್ಲಿ ಈ ಒಕ್ಕೂಟವನ್ನು ಹುಟ್ಟುಹಾಕಿದೆವು ಎಂದರು. ಮಹಿಳೆಯರನ್ನು ಭೋಗದ ಸರಕನ್ನಾಗಿ ನೋಡುವುದು, ಅವರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಚಿಂತೆಯ ಸಂಗತಿಯಾಗಿದೆ. ಇದಕ್ಕೆ ಸಮಾಜ, ನ್ಯಾಯಾಲಯ ಮತ್ತು ಮಹಿಳೆಯರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಹುಡುಕಾಟ, ನಿರಂತರ ಶೋಧ ನಮ್ಮದಾಗಿದೆ ಎಂದು ಅವರು ಹೇಳಿದರು.
ದುಡಿಯುವ ವರ್ಗದ ಮಹಿಳೆಯರಿಂದ ಹಿಡಿದು ಬೌಧ್ಧಿಕ ವರ್ಗದವರೆಗೂ ಎಲ್ಲಾ ಸ್ಥರದ ಜನತೆ ಈ ಒಕ್ಕೂಟಕ್ಕೆ ಬೆಂಬಲ ನೀಡುತ್ತಿರುವುದು ನಮ್ಮ ಶಕ್ತಿಯನ್ನು ಹಿಮ್ಮಡಿಗೊಳಿಸಿದೆ. ಎಳೆಯ ತಲೆಮಾರು, ಯುವಜನತೆ ನಮಗೆ ತುಂಬಾ ಪೂರಕವಾಗಿ ಸ್ಪಂದಿಸಿದ್ದಾರೆ. ಸಮಾವೇಶ ನಡೆಯುವ ಜಿಲ್ಲೆಯ ಸ್ಥಳೀಯ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಒಕ್ಕೂಟವು ಪ್ರತಿ ವರ್ಷ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಅವರು ತಿಳಿಸಿದರು.
ರೈತನಾಯಕಿ ಸುನಂದ ಜಯರಾಂರವರು ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿವಿ ಮಂಡ್ಯ ಹೊರಾವರಣ ಕೇಂದ್ರದ ವಿಶೇಷಾಧಿಕಾರಿ ಡಾ.ಹೇಮಲತಾ, ಶಾರದಾ ಗೋಪಾಲ, ರಾಧಾಮಣಿ, ಮೋಲಿ ಫುಡ್ತಾರೋ, ಶೋಭ, ಇತರರು ಉಪಸ್ಥಿತರಿದ್ದರು.
ಸಹಜ ಸಾಗುವಳಿ ಪತ್ರಿಕೆ ಸಂಪಾದಕಿ ವಿ.ಗಾಯತ್ರಿ, ಲೇಖಕಿಯರಾದ ಬಾನು ಮಸ್ತಾಕ್, ಡಾ.ಸಬಿತಾ ಬನ್ನಾಡಿ, ಸತ್ಯಾ ಎಸ್. ವಿಚಾರ ಮಂಡಿಸಿದರು. ಸಂಜೆ ಸಂಜಯ ವೃತ್ತದಿಂದ ಕಪ್ಪುಡೆಗೆಯಲ್ಲಿ ಮಹಿಳೆಯರು ಜಾಗೃತಿ ಜಾಥಾ ನಡೆಸಿದರು.
“ರಾತ್ರಿ ವೇಳೆ ಹೆಣ್ಣು ಮಕ್ಕಳು ಹೊರಗೆ ಬರಬಾರದು ಎನ್ನುವ ವಾದಕ್ಕೆ ನಮ್ಮದು ಪ್ರತಿವಾದ ಇದೆ. ಅದೆಂದರೆ, ರಾತ್ರಿ ವೇಳೆ ಪುರುಷರನ್ನೇ ಮನೆಯಲ್ಲಿ ಕೂಡಿಹಾಕಿ ರಾತ್ರಿಗಳನ್ನು, ಬೀದಿಗಳನ್ನು ನಾವು ವಶಪಡಿಸಿಕೊಳ್ಳಬೇಕು. ಇದನ್ನು ಸಾಕಾರಗೊಳಿಸಲು ಮುಂದಾಗೋಣ”.
-ವೋಲ್ಗಾ, ಸ್ತ್ರೀವಾದಿ ಚಿಂತಕಿ, ಹೈದರಾಬಾದ್







