ತಮಿಳುನಾಡು, ಲಡಾಖ್‌ಗೂ ಹಬ್ಬಿದ ಕೊರೋನಾ ಸೋಂಕು

ಹೊಸದಿಲ್ಲಿ : ಮಾರಕ ಕೋವಿಡ್-19 ವೈರಸ್ ಸೋಂಕು ಭಾರತದಲ್ಲಿ ತನ್ನ ಹೆಜ್ಜೆಗುರುತು ವಿಸ್ತರಿಸಿದೆ. ಮತ್ತೆ ಮೂರು ಕೊರೋನಾ ಪ್ರಕರಣಗಳು ದೃಢಪಟ್ಟಿರುವುದನ್ನು ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ಉತ್ತರದ ಲಡಾಖ್‌ನಲ್ಲಿ ಇಬ್ಬರು ಹಾಗೂ ದಕ್ಷಿಣದ ತಮಿಳುನಾಡಿನಲ್ಲಿ ಒಬ್ಬರು ಸೋಂಕಿನಿಂದ ಬಳಲುತ್ತಿರುವುದು ದೃಢಪಟ್ಟಿದೆ. ಇದಕ್ಕೂ ಮುನ್ನ ಈ ಎರಡೂ ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವ ಪ್ರಕರಣವೂ ವರದಿಯಾಗಿರಲಿಲ್ಲ.
ಭೂತಾನ್‌ನಲ್ಲಿ 76 ವರ್ಷದ ಅಮೆರಿಕನ್ ಪ್ರಜೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ನೈರ್ಮಲ್ಯ ಮತ್ತು ಸಂಪರ್ಕ ತಡೆ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ಈ ವ್ಯಕ್ತಿಯ ಪ್ರವಾಸಪಟ್ಟಿಯಲ್ಲಿ ಬ್ರಹ್ಮಪುತ್ರಾ ನದಿ ವಿಹಾರ ಮತ್ತು ಜೋಹ್ರತ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಸೇರಿದ್ದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ವ್ಯಕ್ತಿಯ ಸಂಪರ್ಕದಲ್ಲಿದ್ದ 150 ಮಂದಿಯ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಉತ್ತರ ಪ್ರದೇಶದಲ್ಲಿ 8, ದೆಹಲಿಯಲ್ಲಿ 3, ಕೇರಳದಲ್ಲಿ 3 ಹಾಗೂ ತೆಲಂಗಾಣದಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ. ಇದರ ಜತೆಗೆ ಕಳೆದ ತಿಂಗಳು ರಾಜಸ್ಥಾನದಲ್ಲಿ ಪ್ರವಾಸ ಕೈಗೊಂಡ 16 ಮಂದಿ ಇಟೆಲಿ ಪ್ರಜೆಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದುವರೆಗೆ ಭಾರತದಲ್ಲಿ ದೃಢಪಟ್ಟ ಪ್ರಕರಣಗಳು 34 ಎಂದು ಆರೋಗ್ಯ ಸಚಿವಾಲಯ ಹೇಳಿದೆ.
"ಇತ್ತೀಚೆಗೆ ಇರಾನ್ ಪ್ರವಾಸ ಕೈಗೊಂಡ ಲಡಾಖ್‌ನ ಇಬ್ಬರಲ್ಲಿ ಹಾಗೂ ಓಮನ್ ದೇಶಕ್ಕೆ ಭೇಟಿ ನೀಡಿದ್ದ ತಮಿಳುನಾಡು ವ್ಯಕ್ತಿಯಲ್ಲಿ ಈ ಸೋಂಕು ದೃಢಪಟ್ಟಿದೆ. ಈ ಎಲ್ಲ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ" ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.







