ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ವೈರಸ್ ಸೋಂಕು
ಭಾರತದಲ್ಲಿ ಒಟ್ಟು ವೈರಸ್ ಪೀಡಿತರ ಸಂಖ್ಯೆ 39ಕ್ಕೇರಿಕೆ

ತಿರುವನಂತಪುರ, ಮಾ.8: ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ವೈರಸ್ ಪೀಡಿತರ ಸಂಖ್ಯೆ 39ಕ್ಕೇರಿಕೆಯಾಗಿದೆ.
ಕೇರಳದಲ್ಲಿ ಸೋಂಕು ಅಂಟಿದ ಐವರು ಒಂದೇ ಕುಟುಂಬದವರಾಗಿದ್ದು, ಇವರಲ್ಲಿ ಮೂವರು ಇತ್ತೀಚೆಗಷ್ಟೇ ಇಟಲಿಗೆ ಭೇಟಿ ನೀಡಿದ್ದರು. ಕೊರೋನ ವೈರಸ್ ಪೀಡಿತವಾಗಿರುವ ದೇಶಗಳಲ್ಲಿ ಇಟಲಿ ಕೂಡ ಒಂದಾಗಿದೆ.
‘‘ಕುಟುಂಬವು ಏರ್‌ಪೋರ್ಟ್‌ನಲ್ಲಿ ತಮ್ಮ ಪ್ರಯಾಣದ ಇತಿಹಾಸವನ್ನು ಹಂಚಿಕೊಂಡಿರಲಿಲ್ಲ. ಹೀಗಾಗಿ ಅವರನ್ನು ತಪಾಸಣೆ ನಡೆಸಿರಲಿಲ್ಲ. ಇಟಲಿಯಿಂದ ಬಂದಿರುವ ಕುಟುಂಬ ಸದಸ್ಯರು ಆರಂಭದಲ್ಲಿ ಹಾಸ್ಪಿಟಲ್‌ಗೆ ದಾಖಲಾಗಲು ನಿರಾಕರಿಸಿದ್ದಾರೆ. ನಾವು ಅವರ ಮನವೊಲಿಸಿದ್ದೇವೆ’’ಎಂದು ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ಹೇಳಿದ್ದಾರೆ.
ವೈರಸ್ ಪತ್ತೆ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ಐವರ ಪೈಕಿ ಮಗೂ ಕೂಡ ಸೇರಿದೆ. ‘‘ಮಗು ಹಾಗೂ ಹೆತ್ತವರು ಇತ್ತೀಚೆಗೆ ಇಟಲಿಗೆ ತೆರಳಿದ್ದರು. ಅವರು ಇಟಲಿಯಿಂದ ವಾಪಸಾದ ಬಳಿಕ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ. ಅವರ ಸಂಬಂಧಿಕರು ವೈರಸ್ ಲಕ್ಷಣ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ತೆರಳಿದ್ದರು. ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗಿದೆ. ಇಟಲಿಗೆ ಪ್ರಯಾಣಿಸಿದ್ದ ಕುಟುಂಬವನ್ನು ಪ್ರತ್ಯೇಕವಾಗಿಟ್ಟು ನಿಗಾವಹಿಸಲಾಗಿದೆ’’ ಎಂದು ಶೈಲಜಾ ತಿಳಿಸಿದ್ದಾರೆ.







