ಶಾರುಕ್‌ಗೆ ಮತ್ತೆ ಕಾಜೋಲ್ ನಾಯಕಿ

ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಝೀರೋ ಚಿತ್ರದ ಬಳಿಕ ಶಾರುಕ್ ಖಾನ್ ಬೆಳ್ಳೆತೆರೆಯಿಂದ ಅಲ್ಪಸಮಯದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಕಳೆದ ಎರಡು ಮೂರು ತಿಂಗಳುಗಳಿಂದ ಶಾರುಕ್ ಪುನರಾಗಮನದ ಬಗ್ಗೆ ಬಾಲಿವುಡ್ ಅಂಗಳದಲ್ಲಿ ದಟ್ಟವಾದ ವದಂತಿಗಳು ಹರಿದಾಡುತ್ತಿವೆ. ರಾಜ್ ಹಾಗೂ ಕೃಷ್ಣಾ ಡಿ.ಕೆ. ನಿರ್ದೇಶಕ ಜೋಡಿಯ ಚಿತ್ರದಲ್ಲಿ ಅವರು ನಟಿಸಲಿದ್ದಾರೆಂಬ ಊಹಾಪೋಹಗಳು ಒಂದೆಡೆ ಕೇಳಿಬರುತ್ತಿವೆೆ. ಈ ನಡುವೆ ರಾಜ್‌ಕುಮಾರ್ ಹೀರಾನಿ ನಿರ್ದೇಶನದ ಚಿತ್ರವೊಂದರಲ್ಲಿಯೂ ಅವರು ನಟಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ,. ಈ ಚಿತ್ರದಲ್ಲಿ ಶಾರುಕ್‌ಗೆ ನಾಯಕಿಯಾಗಿ ಕಾಜೋಲ್ ಅಭಿನಯಿಸುವ ಸಾಧ್ಯತೆಗಳು ದಟ್ಟವಾಗಿವೆಯಂತೆ. ಶಾರುಕ್-ಕಾಜೋಲ್ ತಾರಾ ಜೋಡಿಯ ಚಿತ್ರಗಳಾದ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕಭಿ ಖುಷಿ ಕಭಿ ಗಮ್ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದುದು ಈಗ ಇತಿಹಾಸವಾಗಿದೆ. ಹೀರಾನಿ ನಿರ್ದೇಶನದ ಚಿತ್ರಕ್ಕೆ ಇನ್ನೂ ಯಾವುದೇ ಹೆಸರಿಡಲಾಗಿಲ್ಲವಂತೆ. ಚಿತ್ರವು ಗುಜರಾತ್, ಲಂಡನ್ ಹಾಗೂ ಕೆನಡಾದಲ್ಲಿ ಚಿತ್ರೀಕರಣಗೊಳ್ಳಲಿದೆ.
ಅಂದಹಾಗೆ ರಾಜ್‌ಕುಮಾರ್ ಹೀರಾನಿ ತನ್ನ ಮುನ್ನಾಭಾಯಿ ಎಂಬಿಬಿಎಸ್ ಚಿತ್ರಕ್ಕೆ ಮೊದಲು ಅವರು ನಾಯಕ ಪಾತ್ರಕ್ಕೆ ಶಾರುಕ್ ಅವರನ್ನೇ ಆಯ್ಕೆ ಮಾಡಲು ಬಯಸಿದ್ದರು . ಇದಕ್ಕಾಗಿ ಅವರು ಮಾತುಕತೆ ಕೂಡಾ ನಡೆಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗದೆ, ಸಂಜಯ್‌ದತ್ ಆ ಪಾತ್ರಕ್ಕೆ ಆಯ್ಕೆಯಾದರು. ಇದೀಗ ಮುನ್ನಾಭಾಯಿ ಎಂಬಿಬಿಎಸ್‌ನಂತೆ, ಹೀರಾನಿ ನಿರ್ದೇಶನದ ಈ ಚಿತ್ರವು ಬಾಲಿವುಡ್‌ಗೆ ಒಂದು ಅವಿಸ್ಮರಣೀಯ ಕೊಡುಗೆಯಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ





