ಗ್ರಾಮೀಣ ಪತ್ರಿಕೆಗಳು ನಾಶವಾದರೆ ಸಮಾಜಕ್ಕೆ ಅಪಾಯ: ರಾಮೇಗೌಡ
ಗ್ರಾಮೀಣ ಪತ್ರಿಕೋದ್ಯಮದ ಸವಾಲು- ವಿಚಾರಗೋಷ್ಠಿಯಲ್ಲಿ ಅಭಿಪ್ರಾಯ

ಮಂಗಳೂರು : ಗ್ರಾಮೀಣ ಪತ್ರಿಕೆಗಳ ಹಿತ ಕಾಯದೇ ಇದ್ದರೆ ಗ್ರಾಮೀಣ ಪತ್ರಿಕೆಗಳು ನಾಶವಾಗುವ ಆತಂಕ ಇದೆ. ಗ್ರಾಮೀಣ ಪತ್ರಿಕೆಗಳು ನಾಶವಾದರೆ ಸಮಾಜಕ್ಕೆ ಅಪಾಯ ಇದೆ. ಆದುದರಿಂದ ಗ್ರಾಮೀಣ ಪತ್ರಿಕೆಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ರಾಮನಗರ ಬಯಲುಸೀಮೆ ಪತ್ರಿಕೆಯ ಸು ತ ರಾಮೇಗೌಡ ಹೇಳಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಗ್ರಾಮೀಣ ಪತ್ರಿಕೋದ್ಯಮದ ಸವಾಲು ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗಿನ ಶಕ್ತಿ ಪತ್ರಿಕೆ ಸಂಪಾದಕ ಜಿ.ರಾಜೇಂದ್ರ ಮಾತನಾಡಿ ಗ್ರಾಮೀಣ ಪತ್ರಿಕೆ ನಡೆಸಲು ದೊಡ್ಡ ಎದೆಗಾರಿಕೆ ಬೇಕು ಎಂದು ಹೇಳಿದರು. ಗ್ರಾಮೀಣ ಸಮಸ್ಯೆಗಳನ್ನು ಗ್ರಾಮೀಣ ಪತ್ರಕರ್ತ ದಿನಾ ಬಿಂಬಿಸುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಸರಕಾರ ಮಾತ್ರ ಗಮನಿಸುತ್ತಿಲ್ಲ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಾಸನದ ಜನತಾಮಾಧ್ಯಮದ ಸಂಪಾದಕ ಆರ್.ಪಿ.ವೆಂಕಟೇಶ್ ಮೂರ್ತಿ ಮಾತನಾಡಿ ಗ್ರಾಮೀಣ ಪ್ರದೇಶದ ಸಣ್ಣ ಪತ್ರಿಕೆಗಳನ್ನು ನಡೆಸುವುದು ಕಷ್ಟದ ಮತ್ತು ಸವಾಲಿನ ಕೆಲಸ ಎಂದು ಅವರು ಹೇಳಿದರು. ಸಹಕಾರಿ ತತ್ವದಡಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಸಣ್ಣ ಪತ್ರಿಕೆಗಳ ಉಳಿವು ಸಾಧ್ಯ ಎಂದರು.
ರಾಯಚೂರಿನ 'ರಾಯಚೂರು ವಾಣಿಯ' ಅರವಿಂದ ಕುಲಕರ್ಣಿ, ವಿಜಯಪುರ ಕನ್ನಡ ಕಹಳೆ ಪತ್ರಿಕೆಯ ರಶ್ಮಿ ಪಾಟೀಲ್, ಬೆಂಗಳೂರಿನ ಪತ್ರಕರ್ತ ಸಿ.ಆರ್.ಮಂಜುನಾಥ್ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉಪಸ್ಥಿತರಿದ್ದರು. ಪತ್ರಕರ್ತ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.







