ಶತಾಯುಷಿ ಅಥ್ಲೀಟ್, ಅಣಬೆ ಮಹಿಳೆ ಸೇರಿದಂತೆ 15 ಮಹಿಳೆಯರಿಗೆ ‘ನಾರಿ ಶಕ್ತಿ’ ಪ್ರಶಸ್ತಿ ಪ್ರದಾನ
ಹೊಸದಿಲ್ಲಿ,ಮಾ.8: ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ನಾರಿ ಶಕ್ತಿ ಪುರಸ್ಕಾರಗಳು ಪ್ರದಾನಿಸಲ್ಪಟ್ಟ 15 ಸಾಧಕಿಯರಲ್ಲಿ ಗಾರೆ ಕೆಲಸದ ಮಹಿಳೆ, ಶತಾಯುಷಿ ಅಥ್ಲೀಟ್, ಜಾರ್ಖಂಡ್‌ನ ಲೇಡಿ ಟಾರ್ಜಾನ್ ಮತ್ತು ‘ಅಣಬೆ ಮಹಿಳೆ’ ಸೇರಿದ್ದಾರೆ.
ಸರಕಾರವು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಮಹಿಳೆಯರ ಅವಿಶ್ರಾಂತ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ನಾರಿ ಶಕ್ತಿ ಪುರಸ್ಕಾರಗಳನ್ನು ಪ್ರದಾನಿಸುತ್ತದೆ.
2019ನೇ ಸಾಲಿನ ಪುರಸ್ಕಾರ ವಿಜೇತರಲ್ಲಿ ಕೃಷಿ, ಕ್ರೀಡೆ, ಕರಕುಶಲ, ಅರಣ್ಯೀಕರಣ ಮತ್ತು ವನ್ಯಜೀವಿ ಸಂರಕ್ಷಣೆ, ಸಶಸ್ತ್ರ ಪಡೆಗಳು ಮತ್ತು ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕಿಯರಿದ್ದಾರೆ.
ಅಣಬೆ ಕೃಷಿಯನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಪ್ರೀತಿಯಿಂದ ‘ಅಣಬೆ ಮಹಿಳೆ’ಎಂದೇ ಕರೆಯಲ್ಪಡುತ್ತಿರುವ ಬಿನಾ ದೇವಿ (43) ಅಣಬೆ ಕೃಷಿ ಮಾಡುವ ಜೊತೆಗೆ ಧಾವರಿ ಪಂಚಾಯತ್‌ನ ಸರಪಂಚ್ ಕೂಡ ಆಗಿದ್ದಾರೆ. ಅಣಬೆ ಕೃಷಿ,ಸಾವಯವ ಕೃಷಿ, ಎರೆಹುಳ ಗೊಬ್ಬರ ತಯಾರಿಕೆ, ಸಾವಯವ ಕೀಟನಾಶಕ ತಯಾರಿಕೆ ಕುರಿತು ಹಲವಾರು ಕೃಷಿಕರಿಗೆ ತರಬೇತಿ ನೀಡಿದ್ದಾರೆ. ಅವರಿಂದ ಸ್ಫೂರ್ತಿ ಪಡೆದು 1,500ಕ್ಕೂ ಅಧಿಕ ಮಹಿಳೆಯರು ಅಣಬೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಇನ್ನೋರ್ವ ಪ್ರಶಸ್ತಿ ವಿಜೇತೆ 103ರ ಹರೆಯದ ಮಾನ್ ಕೌರ್ ‘ಚಂಡಿಗಡದ ಪವಾಡ’ ಎಂದೇ ಖ್ಯಾತರಾಗಿದ್ದಾರೆ. ತನ್ನ 93ನೇ ವಯಸ್ಸಿನಲ್ಲಿ ಅಥ್ಲೆಟಿಕ್ ಕ್ರೀಡಾಜೀವನವನ್ನು ಆರಂಭಿಸಿದ್ದ ಅವರು 2016ರಲ್ಲಿ ಪೋಲಂಡ್‌ನ ವಿಶ್ವ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಬಂಗಾರದ ಪದಕಗಳನ್ನು ಗಳಿಸಿದ್ದು, ಅಮೆರಿಕನ್ ಮಾಸ್ಟರ್ಸ್ ಗೇಮ್‌ನಲ್ಲಿ ವಿಶ್ವದ ಅತ್ಯಂತ ವೇಗದ ಶತಾಯುಷಿ ಓಟಗಾರ್ತಿ ಎಂಬ ಹೆಗ್ಗಳಿಕೆಯೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ.
ಕಾನ್ಪುರ್ ಜಿಲ್ಲೆಯಲ್ಲಿ 40,000ಕ್ಕೂ ಅಧಿಕ ಶೌಚಾಲಯಗಳ ನಿರ್ಮಾಣಕ್ಕೆ ಕಾರಣರಾಗಿ ಬಯಲು ಶೌಚ ತಡೆಯಲು ಶ್ರಮಿಸಿದ್ದಕ್ಕಾಗಿ ಗಾರೆ ಕೆಲಸವನ್ನು ಮಾಡುವ ಕಲಾವತಿ ದೇವಿ (58) ಅವರಿಗೆ ಪುರಸ್ಕಾರವು ಒಲಿದಿದೆ.
ಬುಡಕಟ್ಟು ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿರುವ ತೆಲಂಗಾಣದ ಪಡಲ ಭೂದೇವಿ(40), ನಶಿಸಿಹೋಗಿದ್ದ ನುಮ್ಧಾ ಕರಕುಶಲ ಕಲೆಯನ್ನು ಪುನರುಜ್ಜೀವನಗೊಳಿಸಿ 100ಕ್ಕೂ ಅಧಿಕ ಮಹಿಳೆಯರಿಗೆ ತರಬೇತಿ ನೀಡಿರುವ ಕಾಶ್ಮೀರದ ಆರಿಫಾ ಜಾನ್(33), ಜಾರ್ಖಂಡ್‌ನ ‘ಲೇಡಿ ಟಾರ್ಜಾನ್’ ಎಂದೇ ಹೆಸರಾಗಿರುವ ಪರಿಸರವಾದಿ ಚಾಮಿ ಮುರ್ಮು(47), ಲಡಾಖ್‌ನ ಹೋಟೆಲ್ ಉದ್ಯಮಿ ನಿಲ್ಝಾ ವಾಂಗ್ಮೊ(40), 36 ವರ್ಷಗಳಿಂದಲೂ ಆಟೊಮೊಬೈಲ್ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ ನಿರ್ದೇಶಕಿ,ಮಹಾರಾಷ್ಟ್ರದ ನಾಗ್ಪುರ ಮೂಲಕದ ರಷ್ಮಿ ಉರ್ಧವಾರ್ದೇಶಿ(60), 2013ರಲ್ಲಿ ಎವರೆಸ್ಟ್ ಶಿಖರವನ್ನೇರಿದ್ದ ಮೊದಲ ಮಹಿಳಾ ಅವಳಿ ಸೋದರಿಯರಾದ ಉತ್ತರಾಖಂಡದ ತಾನ್ಶಿ ಮತ್ತು ನುಂಗ್ಶಿ ಮಲಿಕ್(28),ಪ.ಬಂಗಾಳದ ಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ ಕೌಷಿಕಿ ಚಕ್ರವರ್ತಿ(38), ಐಎಎಫ್‌ಗೆ ಸೇರ್ಪಡೆಗೊಂಡ ಮೊದಲ ಮಹಿಳಾ ಯುದ್ಧಪೈಲಟ್‌ಗಳಾದ ಅವನಿ ಚತುರ್ವೇದಿ(26),ಭಾವನಾ ಕಾಂತ್(27) ಮತ್ತು ಮೋಹನಾ ಸಿಂಗ್ ಜಿತರ್ವಾಲ್(28), ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನಡಿ ನಾಲ್ಕನೇ ತರಗತಿಗೆ ಸಮಾನ ಸಾಕ್ಷರತೆ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಭಾಗೀರಥಿ ಅಮ್ಮ (105) ಮತ್ತು ಕಾತ್ಯಾಯಿನಿಅಮ್ಮ(98) ಇತರ ನಾರಿ ಶಕ್ತಿ ಪ್ರಶಸ್ತಿ ವಿಜೇತರಾಗಿದ್ದಾರೆ.







