ಮಾಜಿ ಪಿಡಿಪಿ ನಾಯಕ ಬುಖಾರಿ ಅವರಿಂದ ಹೊಸಪಕ್ಷ ಸ್ಥಾಪನೆ

ಶ್ರೀನಗರ,ಮಾ.8: ಮಾಜಿ ಪಿಡಿಪಿ ನಾಯಕ ಸೈಯದ್ ಅಲ್ತಾಫ್ ಬುಖಾರಿ ಅವರು ‘ಜಮ್ಮು-ಕಾಶ್ಮೀರ ಅಪ್ನಿ ಪಾರ್ಟಿ’ ಎಂಬ ಹೊಸ ರಾಜಕೀಯ ಪಕ್ಷವನ್ನು ರವಿವಾರ ಹುಟ್ಟುಹಾಕಿದ್ದಾರೆ.
‘ಜನತೆಯ ಇಚ್ಛೆಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ ಮತ್ತು ಜನರು ರಾಜಕೀಯ ಪ್ರಕ್ರಿಯೆಯ ನಿಜವಾದ ಪಾಲುದಾರರಾಗಿರುವ ಕಾರ್ಯಸಾಧ್ಯ ರಾಜಕೀಯ ವೇದಿಕೆಯನ್ನು ಸೃಷ್ಟಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಪಕ್ಷದ ಉದ್ಘಾಟನೆ ಸಂದರ್ಭ ತಿಳಿಸಿದ ಬುಖಾರಿ,ಪ್ರದೇಶದ ಅನನ್ಯತೆಯನ್ನು ರಕ್ಷಿಸಲು ಪಕ್ಷವು ಶ್ರಮಿಸಲಿದೆ ಮತ್ತು ಜನರ ಹಕ್ಕುಗಳನ್ನು ಎತ್ತಿ ಹಿಡಿಯಲಿದೆ. ನೂತನ ಪಕ್ಷವು ಕಾಶ್ಮೀರಿ ಪಂಡಿತರು ಘನತೆಯಿಂದ ಮರಳುವಂತಾಗಲು ಮತ್ತು ಯುವಜನತೆ ಹಾಗೂ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿಯೂ ಶ್ರಮಿಸಲಿದೆ ಎಂದರು.
ಯಾವುದೇ ಒಂದು ಕುಟುಂಬವು ಈ ಪಕ್ಷವನ್ನು ಹುಟ್ಟುಹಾಕಿಲ್ಲ ಮತ್ತು ಯಾವುದೇ ವ್ಯಕ್ತಿ ಪಕ್ಷದ ಅಧ್ಯಕ್ಷನಾಗಿ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಇದು ಜನಸಾಮಾನ್ಯರಿಗಾಗಿ ಜನಸಾಮಾನ್ಯರಿಂದ ಜನಸಾಮಾನ್ಯರ ಪಕ್ಷವಾಗಿರಲಿದೆ ಎಂದು ಬುಖಾರಿ ತಿಳಿಸಿದರು.





