ದೇಶದಲ್ಲಿ ಒಳ್ಳೆಯ ಮನಸ್ಸುಗಳು ಹೆಚ್ಚಾಗಲಿ: ವೈದೇಹಿ

ಉಡುಪಿ, ಮಾ.8: ಒಳ್ಳೆಯ ಮನಸ್ಸಿದ್ದರೆ ದೇಶ, ಸಮಾಜ, ಮನೆ ಸೇರಿದಂತೆ ಎಲ್ಲರನ್ನು ಕೂಡ ಗೆಲ್ಲಲು ಸಾಧ್ಯವಾಗುತ್ತದೆ. ಮನಸ್ಸು ಹಾಳು ಮಾಡಿದರೆ ಅದಕ್ಕಿಂತ ದೊಡ್ಡ ಪ್ರಳಯ ಬೇರೊಂದಿಲ್ಲ. ಆದುದರಿಂದ ಈ ದೇಶದಲ್ಲಿ ಒಳ್ಳೆಯ ಮನಸ್ಸುಗಳು ಹೆಚ್ಚಾಗಬೇಕಾಗಿದೆ ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದ್ದಾರೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಮಳಿಗೆಯಲ್ಲಿ ರವಿ ವಾರ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಮಹಿಳಾ ಸಾಧಕರೊಂದಿಗೆ ಸಂವಾದ ಹಾಗೂ ಸನ್ಮಾನ ಮತ್ತು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಆತ್ಮೀಯತೆ, ಪ್ರೀತಿ, ಸಂಬಂಧಗಳು ಈ ದೇಶದಲ್ಲಿ ಕಡಿಮೆ ಆಗುತ್ತಿದೆ. ಆದುದರಿಂದ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಬೇಕು. ಉದ್ಯಮ ನಡೆಸುವವರು ಸಮಾಜದಿಂದ ಪಡೆಯುತ್ತಾರೆಯೇ ಹೊರತು ಸಮಾಜಕ್ಕೆ ನೀಡುವುದು ಬಹಳ ಕಡಿಮೆ. ಆದರೆ ಮಲಬಾರ್ ಗೋಲ್ಡ್ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಕೆಲಸ ವಾಡುತ್ತಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗಿದ್ದಾರೆ. ಮಹಿಳೆಯರು ತಮ್ಮ ಮುಂದೆ ಬರುವ ಅವಕಾಶ ಗಳನ್ನು ಸರಿಯಾಗಿ ಬಳಸಿಕೊಂಡು ಎತ್ತರಕ್ಕೆ ಬೆಳೆಯಬೇಕು. ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಂಡರೇ ಇಡೀ ಜೀವನದಲ್ಲಿ ಬೋರು ಎಂಬುದು ಆಗು ವುದಿಲ್ಲ ಎಂದರು.
ಸ್ಥಳೀಯಾಡಳಿತದಂತೆ ವಿಧಾನಸಭೆಯಲ್ಲಿ ಮಹಿಳೆಯರಿಗೆ ಈವರೆಗೂ ಶೇ.33 ರಷ್ಟು ಮೀಸಲಾತಿ ಜಾರಿಗೆ ತಂದಿಲ್ಲ. ಯಾಕೆಂದರೆ ಕಾನೂನು ಮಾಡುವ ಪುರುಷ ಶಾಸಕರ ಬುಡಕ್ಕೆ ತೊಂದರೆ ಆಗಬಹುದೆಂಬ ಭಯ. ಆದರೂ ಮಹಿಳೆ ಯರು ಮೀಸಲಾತಿಯನ್ನು ಕಾಯದೆ ಸಮಾಜ ಸೇವೆ ಹಾಗೂ ಹೋರಾಟದ ಮೂಲಕ ಜನಮನ್ನಣೆ ಗಳಿಸಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆರಿಸಿ ಬರಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರಾದ ವೈದೇಹಿ ಮಣಿಪಾಲ(ಸಾಹಿತ್ಯ), ಅನುಪಮ ಎಸ್.ಶೆಟ್ಟಿ ಬಸ್ರೂರು(ಶಿಕ್ಷಣ), ಜಾನಕಿ ಹಂದೆ ಕೋಟ(ಕೃಷಿ), ಸುಪ್ರಿಯ ಕಾಮತ್ ಬಾರಕೂರು(ಉದ್ಯಮ), ವಿಜೇತ ಪೈ ಅಜೆಕಾರು(ಕ್ರೀಡೆ), ನಂದಿನಿ ಭಟ್ ಮಣಿಪಾಲ(ಯೊೀಗ) ಅವರನ್ನು ಸನ್ಮಾನಿಸಲಾಯಿತು.
ಸರಕಾರಿ ಶಾಲೆಗಳ ಒಟ್ಟು 30 ವಿದ್ಯಾರ್ಥಿನಿಯರಿಗೆ ಸಹಾಯಧನವನ್ನು ವಿತರಿಸಲಾಯಿತು. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರೆಹಮಾನ್, ಮೆನೇಜರ್ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.








