ದೇಶದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಕಳವಳ ಮುಂದುವರಿಕೆ: ವಿಜಯಲಕ್ಷ್ಮೀ

ಉಡುಪಿ, ಮಾ.8: ಬೇಟಿ ಪಡಾವೋ ಬೇಟಿ ಬಚಾವೋ ಎಂಬುದಾಗಿ ಕೇವಲ ಘೋಷಣೆಯಲ್ಲಿ ಹೇಳುವ ಸರಕಾರ, ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರೂ ಸುರಕ್ಷತೆ ಬಗ್ಗೆ ಕಳವಳ ಈಗಲೂ ಮುಂದುವರಿದಿದೆ ಎಂದು ವಕೀಲೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ವಿಜಯಲಕ್ಷ್ಮೀ ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಇದರ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ(ಎಸ್‌ಐಆರ್‌ಸಿ) ಉಡುಪಿ ಶಾಖೆಯ ಮತ್ತು ನವದೆಹಲಿ ಮಹಿಳಾ ಸದಸ್ಯರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಐಸಿಎಐ ಭವನದಲ್ಲಿ ರವಿವಾರ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿ ಇಂದು ಹೆಣ್ಣುಮಕ್ಕಳ ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ, ಮಹಿಳಾ ದೌರ್ಜನ್ಯ ಪ್ರಕರಣ ಗಳು ಹೆಚ್ಚುತ್ತಿವೆ. ಆದುದರಿಂದ ಮಹಿಳಾ ಸುರಕ್ಷತೆ ಬಗ್ಗೆ ತಳಮಟ್ಟದಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಮಹಿಳೆಯರು ಇನ್ನಷ್ಟು ಬಲಾಢ್ಯರಾಗಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಮಹಿಳಾ ಸಬಲೀಕರಣ ಎಂಬುದು ಹಿಂದೆಗಿಂತಲೂ ಇಂದು ಹೆಚ್ಚು ವೇಗವನ್ನು ಪಡೆದುಕೊಂಡಿದ್ದು, ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮ ಸಾಧನೆಯನ್ನು ತೋರಿಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಈ ರೀತಿಯ ಬದ ಲಾವಣೆಗಳಾದರೂ ಕೂಡ ಓರ್ವ ಮಹಿಳೆ ಮಧ್ಯರಾತ್ರಿ ಸುರಕ್ಷಿತ ವಾಗಿ ನಡೆದಾಡುವಂತಹ ಪರಿಸ್ಥಿತಿ ಇನ್ನೂ ಕೂಡ ಈ ದೇಶದಲ್ಲಿ ನಿರ್ಮಾಣ ಆಗಿಲ್ಲ ಎಂದು ಖೇಧ ವ್ಯಕ್ತಪಡಿಸಿದರು.
ಮಹಿಳೆ ಶಿಕ್ಷಣದ ಮೂಲಕ ಉದ್ಯೋಗ ಪಡೆಯಬೇಕು. ಅದರೊಂದಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಆಗ ಮಾತ್ರ ಮಾತ್ರ ಮಹಿಳೆಯ ಧ್ವನಿಗೆ ಮಾನ್ಯತೆ ದೊರೆಯಲು ಸಾಧ್ಯವಾಗುತ್ತದೆ. ಮಹಿಳೆಯರು ಸ್ವಂತ ನಿರ್ಧಾರ ಕೈಗೊಳ್ಳಲು ಸಮರ್ಥರಾದಾಗ ತಮ್ಮ ಘನತೆಯ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ಆಗಿನಿಂದ ಸರಿಯಾದ ದಿಕ್ಕಿನಲ್ಲಿ ಮಹಿಳಾ ಸಬಲೀಕರಣ ನಡೆಯಲು ಸಾಧ್ಯವಾಗುತ್ತೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಉಡುಪಿ ಶಾಖೆಯ ಅಧ್ಯಕ್ಷ ಸಿಎ ಪ್ರದೀಪ್ ಜೋಗಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷೆ ರೇಖಾ ದಯಾನಂದ ಅವರನ್ನು ಸನ್ಮಾನಿಸಲಾಯಿತು. ಶಾಖೆಯ ಉಪಾಧ್ಯಕ್ಷೆ ಸಿಎ ಕವಿತಾ ಎಂ.ಪೈ ವಂದಿಸಿದರು. ಸಿಎ ಸುಪ್ರಿಯಾ ವಿನಯ್ ಕಾರ್ಯಕ್ರಮ ನಿರೂಪಿಸಿದರು.
ಸಿಎ ಆಂಡ್ರಿಯಾ ಎಸ್.ಲೂಯಿಸ್ ತಾಂತ್ರಿಕ ಅಧಿವೇಶನ ಮತ್ತು ಶರೋಲ್ ಗೋರ್ಜಿನ್ ಕ್ವಾಡ್ರೋಸ್ ಹಾಗೂ ಕರೋಲ್ ಫ್ರೀಡಾ ಕ್ವಾಡ್ರೊಸ್ ಸಿಎಗಳು ಮತ್ತು ಮಹಿಳಾ ಸಿಎ ವಿದ್ಯಾರ್ಥಿಗಳಿಗೆ ಸ್ವರಕ್ಷಣೆ ಕುರಿತು ತರಬೇತಿ ನೀಡಿದರು.







