ಚೀನಾ: ಮತ್ತೆ 27 ಮಂದಿ ಕೊರೋನಗೆ ಬಲಿ
ಸಾವಿನ ಸಂಖ್ಯೆ 3097ಕ್ಕೇರಿಕೆ
ಜಿನೇವಾ,ಮಾ.8: ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಚೀನಾದಲ್ಲಿ ರವಿವಾರ 27 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ಆ ದೇಶದಲ್ಲಿ ಮಾರಣಾಂತಿಕ ಸೋಂಕು ರೋಗಕ್ಕೆ ಬಲಿಯಾದವರ ಸಂಖ್ಯೆ 3097ಕ್ಕೇರಿದೆ.
ಆದಾಗ್ಯೂ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಶನಿವಾರಂದು ಇದೇ ಮೊದಲ ಬಾರಿಗೆ 50ಕ್ಕಿಂತಲೂ ಕೆಳಗೆ ಕುಸಿದಿದೆ. ಕಳೆದ ಜನವರಿಯಲ್ಲಿ ಹುಬೈ ಪ್ರಾಂತದಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಸೋಂಕು ತಗಲಿದ ಪ್ರಕರಣಗಳು ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ವರದಿಯಾಗಿರುವುದು ಇದೇ ಮೊದಲ ಸಲವಾಗಿದೆ.
ಇಂದು ಸಂಭವಿಸಿದ ಎಲ್ಲಾ 27 ಸಾವುಗಳು, ಕೊರೋನಾ ವೈರಸ್ ಪೀಡಿತ ಹುಬೈ ಪ್ರಾಂತದಿಂದಲೇ ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತಿಳಿಸಿದೆ.
ಶನಿವಾರ ಪತ್ತೆಯಾದ 44 ಪ್ರಕರಣಗಳ ಪೈಕಿ 41 ಪ್ರಕರಣಗಳು, ರೋಗದ ಕೇಂದ್ರಸ್ಥಾನವೆನಿಸಿರುವ ವೂಹಾನ್ ನಗರದಿಂದಲೇ ವರದಿಯಾಗಿವೆ.
ಇದರೊಂದಿಗೆ ಒಟ್ಟಾರೆಯಾಗಿ ಚೀನಾದಲ್ಲಿ 80,695 ಮಂದಿ ಕೊರೋನಾ ಸೋಂಕು ಪೀಡಿತರಾಗಿದ್ದಾರೆ ಹಾಗೂ 3097 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಯೋಗವು ತಿಳಿಸಿದೆ. 20,500ಕ್ಕೂ ಅಧಿಕ ರೋಗಿಗಳು ಈಗಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 57,065 ಮಂದಿ ಗುಣಮುಖಗೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಎನ್‌ಎಚ್‌ಸಿ ತಿಳಿಸಿದೆ.







