ಎನ್‌ಸಿಸಿ ಅಂತರ್ ಕಾಲೇಜು ಮಟ್ಟದ ‘ಯೋಧ’ ಸ್ಪರ್ಧೆ ಉದ್ಘಾಟನೆ

ಉಡುಪಿ, ಮಾ.8: 3ಎ/21 ಸಿಒವೈ ಎನ್‌ಸಿಸಿ, 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಯಕ್ತ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಉಡುಪಿ ಜಿಲ್ಲೆ ಹಾಗೂ ಶೃಂಗೇರಿ ತಾಲೂಕುಗಳ ಎನ್.ಸಿ.ಸಿ. ಅಂತರ್ ಕಾಲೇಜು ಮಟ್ಟದ ಯೋಧ- 2020 ಸ್ಪರ್ಧೆಯನ್ನು ಶನಿವಾರ ಏರ್ಪಡಿಸಲಾಗಿತ್ತು.
ಸ್ಪರ್ಧೆಯನ್ನು ಉದ್ಘಾಟಿಸಿದ ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾ ಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಮಾತನಾಡಿ, ಕಲಿಕೆಯ ಜತೆಗೆ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಕ್ರೀಡೆ, ಎನ್‌ಸಿಸಿ, ಸ್ಕೌಟ್, ಗೈಡ್ಸ್‌ಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳ ಬೇಕು. ಈ ಮೂಲಕ ನಾಯಕತ್ವದ ಗುಣಗಳು ವೃದ್ಧಿಯಾಗಿ ಊರು, ರಾಜ್ಯ, ದೇಶದ ಅಭಿವೃದ್ಧಿಗೆ ಪೂರಕವಾದ ಬದಲಾವಣೆಗೆ ಶ್ರಮಿಸಬೇಕೆಂದು.
ಪ್ರಸ್ತುತ ಪಠ್ಯ ಪ್ರವಚನಕ್ಕೆ ಸಿಕ್ಕ ಮಹತ್ವ ಪಠ್ಯೇತರ ಚಟುವಟಿಕೆಗಳಿಗೆ ಸಿಗುತಿತಿಲ್ಲ. ಇದರಿಂದಾಗಿ ಮಕ್ಕಳ ದೈಹಿಕ ಕ್ಷಮತೆ ಕುಂಠಿತವಾಗುತ್ತಿದೆ.ದೈಹಿಕವಾಗಿ ಸದೃಢವಾದರೆ ಮಾತ್ರ ಮಾನಸಿಕ ಬೆಳವಣಿಗೆ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಉತ್ತೇಜನ ನೀಡುವ ಅವಶ್ಯವಿದೆ. ಯುವಕ ಶಕ್ತಿ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಭಾರತಾಂಬೆಯ ಕೈ ಬಲಪಡಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಉಡುಪಿ ಎಸ್‌ಸಿಸಿ 21 ಕರ್ನಾಟಕ ಬೆಟಾಲಿಯನ್‌ನ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪರ್ಮಿಂದರ್ ಸಿಂಗ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎ.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ 6 ಕರ್ನಾಟಕ ನೆವಲ್ ಯೂನಿಟ್‌ನ ಕಮಾಂಡಿಂಗ್ ಅಧಿಕಾರಿ ನಂದ ಕಿಶೋರ್, ಎನ್‌ಸಿಸಿ ಆಫಿಸರ್ ವಿಜೇಂದ್ರ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ.ಪ್ರಕಾಶ್ ರಾವ್ ಉಪಸ್ಥಿತರಿದ್ದರು.
ಎನ್‌ಸಿಸಿ ವಿದ್ಯಾರ್ಥಿಗಳಾದ ದೀಕ್ಷಾ ವೈ ಸ್ವಾಗತಿಸಿದರು. ಮಯೂರಿ ವಂದಿಸಿದರು. ಆಲಿಷಾ ಬಾನು ಕಾರ್ಯಕ್ರಮ ನಿರೂಪಿಸಿದರು.







