ಅಮೆರಿಕದ ಪ್ರವಾಸಿ ನೌಕೆಯ ಪ್ರಯಾಣಿಕರಿಗೂ ಕೊರೋನ

ಲಾಸ್‌ಏಂಜಲೀಸ್,ಮಾ.8: ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಕರಾವಳಿಯಲ್ಲಿ ಸಂಚರಿಸುತ್ತಿದ್ದಾಗ ಕೊರೋನಾ ವೈರಸ್ ಪೀಡಿತ ಪ್ರಯಾಣಿಕರು ಪತ್ತೆಯಾದ ಅಮೆರಿಕ ಪ್ರವಾಸಿ ಹಡಗೊಂದು ಓಕ್‌ಲ್ಯಾಂಡ್‌ನ ಬಂದರಿನಲ್ಲಿ ಲಂಗರು ಹಾಕಲಿದೆಯೆಂದು ನೌಕೆಯ ಮಾಲಕರು ತಿಳಿಸಿದ್ದಾರೆ.
ಗ್ರಾಂಡ್‌ಪ್ರಿನ್ಸೆಸ್ ಪ್ರವಾಸಿ ಹಡಗಿನಲ್ಲಿರುವ 19 ಮಂದಿ ನಾವಿಕರು ಹಾಗೂ ಇಬ್ಬರು ಅಮೆರಿಕನ್ ಪ್ರಯಾಣಿಕರಿಗೆ ಕೊರೋನ ಸೋಂಕು ತಗಲಿರುವುದು ಪತ್ತೆ ಯಾಗಿದೆ. ಹಡಗಿನಲ್ಲಿ ಒಟ್ಟು 45 ಮಂದಿಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು.
‘‘ಹಡಗಿನಲ್ಲಿರುವ ಕ್ಯಾಲಿಫೋರ್ನಿಯಾ ನಿವಾಸಿಗಳನ್ನು ದೈಹಿಕ ತಪಾಸಣೆಗೆ ಹಾಗೂ ಪ್ರತ್ಯೇಕವಾಗಿರಿಸಲು ಅವರನ್ನು ಕ್ಯಾಲಿಫೋರ್ನಿಯಾದಲ್ಲಿರುವ ವೈದ್ಯಕೀಯ ಸಂಸ್ಥಾಪನೆಗೆ ರವಾನಿಸಲಾಗುವುದು, ಕ್ಯಾಲಿಫೋರ್ನಿಯಾದ ನಿವಾಸಿಗಳಲ್ಲದವರನ್ನು ಇತರ ರಾಜ್ಯಗಳಲ್ಲಿರುವ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಸಾಗಿಸಲಾಗುವುದು ಎಂದು ಪ್ರಿನ್ಸೆಸ್ ಕ್ರೂಸೆಸ್ ಹಡಗಿನ ವಕ್ತಾರರು ತಿಳಿಸಿದ್ದಾರೆ.
ಹಡಗಿನಿಂದ ಪ್ರಯಾಣಿಕರನ್ನು ಇಳಿಸಲು ಹಲವಾರು ದಿನಗಳು ಬೇಕಾಗಬಹುದು ಎಂದು ಅಮೆರಿಕದ ಪ್ರಯಾಣಿಕಳಾದ ಕ್ಯಾರೊಲಿನ್ ವೈಟ್ ಅವರು ತಿಳಿಸಿದ್ದಾರೆ.
ಅಮೆರಿಕ ಸರಕಾರದ ಕರೋನ ವೈರಸ್ ಪ್ರತಿಬಂಧಕ ಕ್ರಮಗಳ ಉಸ್ತುವಾರಿಯಾಗಿರುವ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಹಡಗಿನಲ್ಲಿರುವ ಎಲ್ಲಾ 3533 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ತಪಾಸಣೆಗೊಳಪಡಿಸಲಾಗುವುದು ಎಂದು ಹೇಳಿದ್ದರು.







