ವಿದೇಶಿ ಪ್ರವಾಸಿ ಹಡಗಿಗೆ ಮಲೇಶ್ಯ, ಥೈಲ್ಯಾಂಡ್ ನಿಷೇಧ

ಕೌಲಾಲಂಪುರ,ಮಾ.8: ಕೊರೋ ಭೀತಿಯ ಹಿನ್ನೆಲೆಯಲ್ಲಿ ಮಲೇಶ್ಯ ಹಾಗೂ ಥೈಲ್ಯಾಂಡ್ ದೇಶಗಳು, ಹಲವಾರು ಇಟಲಿ ಪ್ರಜೆಗಳು ಸೇರಿದಂತೆ 2 ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ತಂದಿರುವ ಪ್ರವಾಸಿ ಹಡಗು ತಮ್ಮ ಬಂದರು ಗಳನ್ನು ಪ್ರವೇಶಿಸುವುದಕ್ಕೆ ನಿಷೇಧ ವಿಧಿಸಿವೆ.
ಹಡಗಿನಲ್ಲಿದ್ದವರಲ್ಲಿ ಕೊರೋನಾ ಸೋಂಕಿನ ಯಾವುದೇ ಶಂಕಿತ ಪ್ರಕರಣಗಳು ಪತ್ತೆಯಾಗದಿದ್ದರೂ, ‘ಕೊಸ್ಟಾ ಫೋರ್ಚುನಾ’ ಎಂಬ ಹೆಸರಿನ ಈ ನೌಕೆಯನ್ನು ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ದ್ವೀಪವಾದ ಫುಕೆಟ್‌ನಿಂದ ಹಿಂದೆ ಕಳುಹಿಸಲಾಗಿದೆಯೆಂದು ಅದರ ನಿರ್ವಾಹಕರು ತಿಳಿಸಿದ್ದಾರೆ. ಮಲೇಶ್ಯವು ತನ್ನ ಬಂದರುಗಳಲ್ಲಿ ಎಲ್ಲಾ ವಿದೇಶಿ ನೌಕೆಗಳ ಪ್ರವೇಶವನ್ನು ನಿರ್ಬಂಧಿಸಿದ್ದು, ಅದರಂತೆ ಕೋಸ್ಟಾ ಫೋರ್ಚುನಾ ಹಡಗನ್ನು ಕೂಡಾ ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಮಲೇಶ್ಯದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಉತ್ತರ ಮಲೇಶ್ಯದ ಪೆನಾಂಗ್ ಬಂದರಿನಲ್ಲಿ ಶನಿವಾರ ಈ ಪ್ರವಾಸಿ ಹಡಗು ಲಂಗರು ಹಾಕಲು ಯತ್ನಿಸಿತ್ತಾದರೂ, ಅದಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.





