‘ಸಾಧನೆಯೆಲ್ಲಾ ಸುಳ್ಳು’: ಪ್ರಧಾನಿಯ ಆಹ್ವಾನ ತಿರಸ್ಕರಿಸಿದ ಬಾಲಕಿ ವಿರುದ್ಧ ಆರೋಪ

ಹೊಸದಿಲ್ಲಿ, ಮಾ.8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿಯ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಿಸುವ ಆಹ್ವಾನವನ್ನು ತಿರಸ್ಕರಿಸಿದ್ದ ಮಣಿಪುರದ ಬಾಲಕಿ ಲಿಸಿಪ್ರಿಯ ಕಂಗುಜಮ್ ತನ್ನ ಸಾಧನೆಯ ಬಗ್ಗೆ ಸುಳ್ಳು ಹೇಳಿ ಪ್ರಸಿದ್ಧಿಗೆ ಬಂದಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಹವಾಮಾನ ಬದಲಾವಣೆ ಕುರಿತ ಕಾನೂನು ಜಾರಿಯಾಗಬೇಕೆಂಬ ಅಭಿಯಾನ ಆರಂಭಿಸಿದ್ದ ಮಣಿಪುರದ ಈ 8 ವರ್ಷದ ಬಾಲಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಳು. ಈ ಹಿನ್ನೆಲೆಯಲ್ಲಿ ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿಯ ಸೋಶಿಯಲ್ ಮೀಡಿಯಾ ಅಕೌಂಟ್ ನಿರ್ವಹಿಸುವ ಸಾಧಕ ಮಹಿಳೆಯರ ಪಟ್ಟಿಯಲ್ಲಿ ಕಂಗುಜಮ್ ಹೆಸರನ್ನೂ ಸೇರಿಸಲಾಗಿತ್ತು. ಆದರೆ , ಭೂಮಿ ರಕ್ಷಣೆಯ ಕುರಿತ ತನ್ನ ಆಗ್ರಹವನ್ನು ಪ್ರಧಾನಿ ಕೇಳಿಸಿಕೊಳ್ಳುವ ತನಕ ತಾನು ಅವರ ಆಹ್ವಾನವನ್ನು ಒಪ್ಪುವುದಿಲ್ಲ ಎಂದು ಕಂಗುಜಮ್ ಟ್ವೀಟ್ ಮಾಡಿದ್ದರು.
ಈ ಮಧ್ಯೆ, ಕಂಗುಜಮ್ ತನ್ನ ಸಾಧನೆಯ ಬಗ್ಗೆ ಸುಳ್ಳು ಹೇಳಿರುವುದಾಗಿ ಇಂಫಾಲ್ ಫ್ರೀಪ್ರೆಸ್ ಪತ್ರಿಕೆಯಲ್ಲಿ ಕಳೆದ ವರ್ಷ ಪ್ರಕಟವಾದ ಬರಹವೊಂದರಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಜಕೀಯ ಕಾರ್ಯಕರ್ತೆ ಆ್ಯಂಜೆಲಿಕಾ ಹೇಳಿದ್ದಾರೆ. 2019ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಸಿಪ್ರಿಯ ಕಂಗುಜುಮ್ ಉಪನ್ಯಾಸ ಮಾಡಿದ್ದರು ಎಂಬ ಹೇಳಿಕೆ ಸತ್ಯವಲ್ಲ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಅಲ್ಲದೆ, ಗ್ಲೋಬಲ್ ಪೀಸ್ ಇಂಡೆಕ್ಸ್ ಕೊಡಮಾಡುವ ಶಾಂತಿ ಪುರಸ್ಕಾರವನ್ನು ಉಲ್ಲೇಖಿಸಿರುವ ಕೆಲವು ಪತ್ರಕರ್ತರು, ಗ್ಲೋಬಲ್ ಪೀಸ್ ಇಂಡೆಕ್ಸ್ ಸಂಸ್ಥೆಯೊಂದಿಗೆ ಲಿಸಿಪ್ರಿಯಾಳ ತಂದೆ ಕೆಕೆ ಸಿಂಗ್ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಈ ಆರೋಪವನ್ನು ಲಿಸಿಪ್ರಿಯಾ ಮತ್ತು ಕೆಕೆ ಸಿಂಗ್ ನಿರಾಕರಿಸಿದ್ದಾರೆ. ತನಗೆ ಬಿಟ್ಟಿ ಪ್ರಚಾರ ಪಡೆಯುವ ಆಸೆಯಿಲ್ಲ. ಇಂತಹ ಆಸೆ ಇದ್ದರೆ ಪ್ರಧಾನಿಯವರ ಸೋಶಿಯಲ್ ಮೀಡಿಯಾ ನಿರ್ವಹಿಸುವ ಅವಕಾಶವನ್ನು ತಿರಸ್ಕರಿಸುತ್ತಿರಲಿಲ್ಲ ಎಂದು ಲಿಸಿಪ್ರಿಯಾ ಹೇಳಿದ್ದಾಳೆ.







