ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ ಉದ್ಘಾಟನೆ

ಹೆಬ್ರಿ, ಮಾ.8: ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ ವತಿ ಯಿಂದ ಮುದ್ರಾಡಿಯ ನಾಟ್ಕದೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಆರೂರು ಕೃಷ್ಣಮೂರ್ತಿ ರಾವ್ ಬಯಲು ರಂಗಮಂದಿರ ಮತ್ತು 10ನೆ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವವನ್ನು ಮಂಗಳೂರು ಶಂಕರ ವಿಠ್ಠಲ್ ಮೋಟಾರ್ಸ್ ಮುಖ್ಯಸ್ಥೆ ಆರೂರು ಲಕ್ಷಿ್ಮೀ ರಾವ್ ಶುಕ್ರವಾರ ಉದ್ಘಾಟಿಸಿದರು.
ಮುದ್ರಾಡಿ ರಾಷ್ಟ್ರೀಯ ರಂಗೋತ್ಸವದ ಗೌರವ ಸ್ವೀಕರಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಆಕಾಶ್‌ರಾಜ್ ಜೈನ್ ಮಾತನಾಡಿ, ಕಲೆ ಸಾಹಿತ್ಯ ನಮ್ಮ ಆತ್ಮದಲ್ಲೇ ಇದ್ದಾಗ ಮಾತ್ರ ಅತ್ಯುನ್ನತ ಸಾಧನೆ ಮಾಡಲು ಸಾಧ್ಯ. ತುಳುವಿಗೆ ಸರಕಾರ ಅಧಿಕೃತ ಮಾನ್ಯತೆ ನೀಡುವವರೆಗೆ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ. ಮುಂದಿನ ಜನಗಣತಿಯಲ್ಲಿ ತುಳು ನಮ್ಮ ಮಾತೃ ಭಾಷೆ ಹಾಗೂ ಕನ್ನಡ ವ್ಯವಹಾರಿಕ ಭಾಷೆ ಎಂಬುದಾಗಿ ನಮೂದಿಬೇಕು ಎಂದು ಮನವಿ ಮಾಡಿದರು.
ಮಂಗಳೂರು ಶಂಕರ ವಿಠ್ಠಲ್ ಮೋಟಾರ್ಸ್ ಆಡಳಿತ ನಿರ್ದೇಶಕ ಡಾ. ಪ್ರಸಾದ್ ರಾವ್ ಮಾತನಾಡಿದರು. ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ವಾಣಿ ಸುಕುಮಾರ್, ಸುಗಂಧಿ ಉಮೇಶ್ ಕಲ್ಮಾಡಿ, ಸುಧೀಂದ್ರ ಮೋಹನ್, ಉಮೇಶ್ ಕಲ್ಮಾಡಿ ಉಪಸ್ಥಿತರಿದ್ದರು.
ರಂಗನಿರ್ದೇಶಕ ಬೆಂಗಳೂರಿನ ಜಗದೀಶ ಜಾಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಬಳಿಕ ಮಂಗಳೂರು ಜಿರ್ನಿ ಥೇಟರ್ ಗ್ರೂಪ್ ತಂಡದವರಿಂದ ಪ್ರೊ.ಅಮೃತ ಸೋಮೇಶ್ವರ ರಚನೆಯ ವಿದ್ದು ಉಚ್ಚಿಲ್ ನಿರ್ದೇಶನದ ಗೋಂದೊಳು ತುಳು ನಾಟಕದ ಪ್ರದರ್ಶನಗೊಂಡಿತು.







