ಸಂಘರ್ಷ, ಯುದ್ಧದಿಂದ ಮಹಿಳೆಯರಿಗೇ ಹೆಚ್ಚು ಸಂಕಷ್ಟ: ಪತ್ರಕರ್ತೆ ಡಾ.ಆರ್.ಪೂರ್ಣಿಮಾ
ಬೆಂಗಳೂರು, ಮಾ.8: ವಿಶ್ವದಾದ್ಯಂತ ಇಂದು ನಡೆಯುತ್ತಿರುವ ಎಲ್ಲ ಸಂಘರ್ಷ, ಯುದ್ಧಗಳು ನಡೆದಾಗ ಹೆಚ್ಚಾಗಿ ಮಹಿಳೆಯರೇ ಸಂಕಷ್ಟಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಎಂದು ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಹೇಳಿದ್ದಾರೆ.
ರವಿವಾರ ನಗರದ ಸುಚಿತ್ರಾ ಫಿಲ್ಮ್‌ಂ ಸೊಸೈಟಿಯಲ್ಲಿ ಅಂತರ್ಜಾಲ ವೇದಿಕೆಯಾದ ಬುಕ್ ಬ್ರಹ್ಮವು ವಸಂತ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಪದ್ಮಿನಿ ನಾಗರಾಜ್‌ಅವರ ‘ಉರಿವ ಬೆಂಕಿಗೆ ಮೈಯಲ್ಲ ಬಾಯಿ’ ಕೃತಿ ಲೋಕಾರ್ಪಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಸಂದರ್ಭದಲ್ಲಿ ವಿಶ್ವದಾದ್ಯಂತ ಎಲ್ಲ ಕಡೆಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ತಲ್ಲಣ, ತವಕಗಳು ನಡೆಯುತ್ತಿವೆ. ಯಾವುದೇ ದೇಶದ ಸಂಘರ್ಷ, ಯುದ್ಧ ಹಾಗೂ ಮತ್ತಿತರೆ ಘಟನೆಗಳು ನಡೆದಾಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಹೆಚ್ಚು ಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಶ್ವದಲ್ಲಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಮುಂದುವರಿದಿದ್ದಾರೆ ಎಂದು ಹೇಳಲಾಗುತ್ತದೆ. ಅಲ್ಲದೆ, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿಲ್ಲ ಎಂದೂ ಹೇಳುತ್ತಿದ್ದಾರೆ. ಆದರೆ, ಇನ್ನೂ ಯಾಕೆ ಮಹಿಳೆಯರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಹೇಳುತ್ತಿಲ್ಲ ಎಂದ ಅವರು, ಇತಿಹಾಸದಲ್ಲಿ ಮಹಿಳೆಯರ ಸಾಧನೆ, ತ್ಯಾಗವನ್ನು ಹುಡುಕಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಮಹಿಳಾ ಸ್ಥಾನ ಮೀಸಲಾತಿ ಕುರಿತು ಯಾವೊಂದು ರಾಜಕೀಯ ಪಕ್ಷವೂ ಮಹಿಳಾ ಪರವಾಗಿಲ್ಲ. ವಾಸ್ತವ ಹೀಗಿದ್ದರೆ, ಭಾರತದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆಗೆ ಏನರ್ಥ ಎಂದು ಪೂರ್ಣಿಮಾ ಪ್ರಶ್ನಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಹೊಸ ಕನಸುಗಳನ್ನು ಕಟ್ಟಿಕೊಳ್ಳಬೇಕಾದ ಇಂದಿನ ಯುವ ಜನಾಂಗವು ಮೊಬೈಲ್‌ಗಳಲ್ಲಿ ಕಾಲ ಕಳೆಯುತ್ತಿದ್ದು, ಈ ಬಗ್ಗೆ ತಾಯಂದಿರು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.
ಮುಂದಿನ ಭವಿಷ್ಯದ ಕನಸು ಕಾಣಬೇಕಾದ ಇಂದಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಗೀಳಿಗೆ ಬೀಳುತ್ತಿದ್ದಾರೆ. ಇದರ ಪರಿಣಾಮವಾಗಿ, ಮಕ್ಕಳಲ್ಲಿ ಬೌದ್ಧಿಕತೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಮಕ್ಕಳಲ್ಲಿ ಕನಸು ಸೃಷ್ಟಿಸಿ, ಅದನ್ನು ಸಾಧ್ಯವಾಗಿಸುವುದು ತಾಯಿ. ಹೀಗಾಗಿ, ತಾಯಿ ಈ ಕುರಿತು ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ತಾಯಿಯು ಮಕ್ಕಳು ಸಣ್ಣವರಿದ್ದಾಗಲೇ ಮಾತೃಭಾಷೆಯನ್ನು ಕಲಿಸುತ್ತಾರೆ. ಅಲ್ಲದೆ, ಅವರು ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸುತ್ತಾರೆ. ಆದರೆ, ರಾಜ್ಯಾಡಳಿತದ ಬಿಗಿ-ಗತ್ತು ಮಾತ್ರ ತಂದೆ ನಿರ್ವಹಿಸಿ ಇತಿಹಾಸ ಸೃಷ್ಟಿಸಬಲ್ಲ. ಪುರಾಣ-ಇತಿಹಾಸವೂ ಸೇದಂತೆ ಜನಸಾಮಾನ್ಯರ ಜಾನಪದೀಯ ಮನದಾಳವೂ ಇದೇ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಕಥೆಗಾರ್ತಿ ಡಾ.ಪದ್ಮಿನಿ ನಾಗರಾಜ್, ಬುಕ್ ಬ್ರಹ್ಮ ಸಂಪಾದಕ ದೇವುಪತ್ತಾರ್ ಉಪಸ್ಥಿತರಿದ್ದರು.







