ಗ್ರಂಥ ರಚನೆಯ ಕೌಶಲ್ಯದಿಂದ ಕವಿತೆಯು ಹೊರಬರುತ್ತದೆ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್
ಬೆಂಗಳೂರು, ಮಾ.8: ಗ್ರಂಥ ರಚನೆಯ ಕೌಶಲ್ಯದಿಂದ ಕವಿತೆಯು ಹೊರಬರುತ್ತದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಪಟ್ಟರು.
ರವಿವಾರ ಭಾರತೀಯ ವಿದ್ಯಾರ್ಥಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಸುಲಭವೇನೇ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೃತಿಯ ಶಿರ್ಷಿಕೆಯು ಕಾವ್ಯ ರಚನೆಗೂ ಅನ್ವಯವಾಗುತ್ತದೆ. ಕಾವ್ಯ ರಚನೆಯೂ ಕಷ್ಟಸಾಧ್ಯವಾದ ಕೆಲಸವಾಗಿದ್ದು ಅನುಭವದ ಕೌಶಲಗಳನ್ನು ಮಿಳಿತಗೊಳಿಸಬೇಕು. ನವೋದಯ ಕಾವ್ಯದ ಕುವೆಂಪು, ಬೇಂದ್ರೆ, ಆಧುನಿಕ ಕಾವ್ಯದ ಕಂಬಾರರು ಸೇರಿದಂತೆ ಹಲವರು ತಮ್ಮ ಕಾವ್ಯದ ಮೂಲಕ ವಿಶಿಷ್ಟ ಮಾರ್ಗ ತೆರೆದರು ಎಂದರು.
ಕಾವ್ಯ ಕಟ್ಟಲು ಅನೇಕ ಬಗೆಯ ಲೋಕಗಳನ್ನು ಪ್ರವೇಶಿಸಿ ತಮ್ಮ ಶೈಲಿಯಲ್ಲಿ ಕಾವ್ಯ ಕಟ್ಟಿದರು. ಬೆರಗು, ಆತಂಕ, ತಲ್ಲಣದಂತಹ ಹಲವು ಬಗೆಗಳು ಕಾವ್ಯದಲ್ಲಿ ಮೂಡಿದವು. ಕವಿ ಮನಸ್ಸು ಎಲ್ಲರಲ್ಲಿಯೂ ಇರುತ್ತದೆ. ಆದರೆ ಅದನ್ನು ಅಭಿವ್ಯಕ್ತಿಗೊಳಿಸುವ ಮಾರ್ಗವನ್ನು ಕೆಲವರು ಮಾತ್ರ ಅನುಸರಿಸುತ್ತಾರೆ ಎಂದು ಕಾವ್ಯದ ವೈಶಿಷ್ಟ್ಯತೆಯನ್ನು ತಿಳಿಸಿದರು.
ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿ, ಕವಯಿತ್ರಿಯ ಕಾವ್ಯ ಸೃಷ್ಟಿ ನವೋದಯ ಪರಂಪರೆಯನ್ನು ಹೊಂದಿದೆ. ಇತ್ತೀಚಿನ ಸಾಹಿತ್ಯ ರಚನೆಯಲ್ಲಿ ಕಾಗುಣಿತ ದೋಷಗಳೇ ಹೆಚ್ಚಾಗಿವೆ, ಇಂತಹ ಸಂದರ್ಭದಲ್ಲಿ ಶುದ್ಧ ಕನ್ನಡದಲ್ಲಿ ಕವಿತೆ ರಚಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಎಚ್.ಎಸ್. ನಾಗಭೂಷಣ, ಕವಯಿತ್ರಿಯರಾದ ವಸುಂಧರಾ ಕೆ.ಎಂ. ಮತ್ತು ಡಾ. ಮಾನಸ ಕೀಳಂಬಿ ಉಪಸ್ಥಿತರಿದ್ದರು.







