ಎನ್‌ಡಬ್ಲ್ಯೂಎಫ್‌ನಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು, ಮಾ.8: ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್‌ಡಬ್ಲ್ಯೂಎಫ್) ಬಜ್ಪೆ ವಲಯ ಸಮಿತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ಮಹಿಳಾ ಶಕ್ತಿ ನೈಜ ಶಕ್ತಿ’ ಎಂಬ ಘೋಷ ವಾಕ್ಯದೊಂದಿಗೆ ಬಜ್ಪೆ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಎನ್‌ಡಬ್ಲ್ಯೂಎಫ್ ರಾಜ್ಯ ಸಮಿತಿಯ ಸದಸ್ಯೆ ಫಾತಿಮಾ ನಸೀಮಾ ಮಾತನಾಡಿ, ಮಹಿಳೆಯರ ಸಾಮಾಜಿಕ ಸಬಲೀಕರಣವಾಗಬೇಕು. ಮಹಿಳೆಯರು ಮಾಡಿದ ತ್ಯಾಗಗಳು ಮತ್ತು ಅವರ ದಿಟ್ಟ ಕಾರ್ಯಗಳನ್ನು ನೆನಪಿಸುವುದು ಈ ದಿನದ ವಿಶೇಷ. ಮಹಿಳೆಯರ ಮೇಲಿನ ಗೌರವ, ಪ್ರೀತಿ, ಕೃತಜ್ಞತೆ ಹೆಚ್ಚಬೇಕು. ಮಹಿಳೆಯರ ರಕ್ಷಣೆ, ಅಭಿವೃದ್ಧಿ ಖಾತರಿಪಡಿಸುವುದು ಈ ದಿನದ ಉದ್ದೇಶವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಜ್ಪೆ ಪಂಚಾಯತ್ ಅಧ್ಯಕ್ಷೆ ರೋಸಿ ಮಥಾಯಿಸ್ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವ ಕಾರಣ ಅದರ ಬಗ್ಗೆ ಜಾಗೃತಿ ಮೂಡಿಸುವ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಸಮಿತಿಯ ಸದಸ್ಯೆ ಝುಲೈಕಾ ಪ್ರಸ್ತಾವನೆಗೈದರು. ಶಮೀಮಾ ವಂದಿಸಿದರು. ರೇಶ್ಮಾ ಅಂಗರಗುಂಡಿ ಕಾರ್ಯಕ್ರಮ ನಿರೂಪಿಸಿದರು.








