ಪಡಿತರ ಚೀಟಿಯಿಲ್ಲ : ಜಾರ್ಖಂಡ್ ನಲ್ಲಿ ಹಸಿವೆಯಿಂದ ವ್ಯಕ್ತಿಯ ಸಾವು

ರಾಂಚಿ,ಮಾ.8: ಬೊಕಾರೊ ಜಿಲ್ಲೆಯ ಗ್ರಾಮವೊಂದರ ವ್ಯಕ್ತಿಯೋರ್ವ ಹಸಿವೆಯಿಂದ ಸಾವನ್ನಪ್ಪಿರುವುದಾಗಿ ಆತನ ಕುಟುಂಬವು ತಿಳಿಸಿದೆ. ಆದರೆ ಇದನ್ನು ಅಲ್ಲಗಳೆದಿರುವ ಜಿಲ್ಲಾಡಳಿತವು,ಆತ ದೀರ್ಘಕಾಲಿಕ ರಕ್ತಹೀನತೆಯಿಂದ ಮೃತಪಟ್ಟಿದ್ದಾನೆ ಎಂದು ಹೇಳಿದೆ.
ಮೃತ ಬುಖಲ್ ಘಾಸಿ(42)ಯ ಬಳಿ ಪಡಿತರ ಚೀಟಿ ಅಥವಾ ಆಯುಷ್ಮಾನ್ ಕಾರ್ಡ್ ಇರಲಿಲ್ಲವೆನ್ನಲಾಗಿದೆ. ಐವರು ಮಕ್ಕಳು ಸೇರಿದಂತೆ ಏಳು ಜನರ ತಮ್ಮ ಕುಟುಂಬವು ನಾಲ್ಕು ದಿನಗಳಿಂದ ಆಹಾರ ಸೇವಿಸಿರಲಿಲ್ಲ ಎಂದು ಆತನ ಪತ್ನಿ ರೇಖಾ ದೇವಿ ಹೇಳಿದ್ದಾಳೆ.
ರಾಜ್ಯದಲ್ಲಿ ಹಸಿವಿನಿಂದ ಸಾವು ಸಂಭವಿಸಿದ ಪ್ರಕರಣಗಳು ವರದಿಯಾಗಿಲ್ಲ ಎಂದು ಸರಕಾರವು ಕಳೆದ ವಾರವಷ್ಟೇ ವಿಧಾನಸಭೆಯಲ್ಲಿ ತಿಳಿಸಿತ್ತು.
ಘಾಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕಾಯಿಲೆಯಿಂದಾಗಿ ಆರು ತಿಂಗಳ ಹಿಂದೆ ಊರಿಗೆ ಮರಳಿದ್ದ ಎಂದು ತಿಳಿಸಿದ ಜಿಲ್ಲಾಧಿಕಾರಿ ಮಹೇಶ ಕುಮಾರ,ಘಾಸಿಯ ಇಡೀ ಕುಟುಂಬ ರಕ್ತಹೀನತೆಯಿಂದ ಬಳಲುತ್ತಿದೆ. ಸರಕಾರದ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
Next Story





