ಪೊಲೀಸ್ ಇಲಾಖೆಯಲ್ಲೇ ಮಹಿಳೆ ಬಗ್ಗೆ ಸುಳ್ಳು ವದಂತಿ ಹಬ್ಬಿಸುತ್ತಾರೆ: ರೂಪಾ ಡಿ.ಮೌದ್ಗಿಲ್

ಬೆಂಗಳೂರು, ಮಾ.8: ಪೊಲೀಸ್ ಇಲಾಖೆಯಲ್ಲೇ ಓರ್ವ ಮಹಿಳಾ ಅಧಿಕಾರಿ ಉನ್ನತ ಸ್ಥಾನಕ್ಕೆ ಹೋಗುವ ಸಾಧ್ಯತೆ ಇದ್ದಾಗ, ಅದನ್ನು ತಪ್ಪಿಸಲು ಆಕೆ ವಿರುದ್ಧ ಸುಳ್ಳು ವದಂತಿ ಹಬ್ಬಿಸುವ ವ್ಯವಸ್ಥೆಯೇ ಇದೆ ಎಂದು ರೈಲ್ವೇ ಇಲಾಖೆ ಐಜಿಪಿ ರೂಪಾ ಡಿ.ಮೌದ್ಗಿಲ್ ಬೇಸರ ವ್ಯಕ್ತಪಡಿಸಿದರು.
ರವಿವಾರ ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾವಣ್ಣ ಪ್ರಕಾಶನ ಹೊರತಂದಿರುವ 16 ಲೇಖಕಿಯರ ಲೇಖನಗಳ ಸಂಗ್ರಹ ‘ಏನೋ ಹೇಳುತ್ತಿದ್ದಾರೆ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮ ಪೊಲೀಸ್ ಇಲಾಖೆಯನ್ನೇ ತೆಗೆದುಕೊಂಡರೆ ಯಾವುದಾದರೂ ಉನ್ನತ ಹುದ್ದೆ ಖಾಲಿಯಿದ್ದಾಗ, ಅದನ್ನು ಪಡೆಯುವುದರಿಂದ ಮಹಿಳೆಯನ್ನು ಮೊದಲು ದೂರಗೊಳಿಸೋಣ, ಬಳಿಕ ಪುರುಷರು ಹುದ್ದೆ ಪಡೆದರಾಯಿತು ಎಂದು ಯೋಜಿಸಲಾಗುತ್ತದೆ. ಅಷ್ಟಕ್ಕೆ ಸಾಲದೆ, ಆಕೆಯೊಂದಿಗೆ ಕೆಲಸ ಮಾಡಲಾಗುವುದಿಲ್ಲ ಹಾಗೂ ಹುದ್ದೆ ನಿಭಾಯಿಸಲು ಆಕೆಗೆ ಸಾಧ್ಯವುದಿಲ್ಲ ಎಂದು ವದಂತಿ ಹಬ್ಬಿಸಲಾಗುತ್ತದೆ ಎಂದು ಆರೋಪಿಸಿದರು.
ಎಲ್ಲ ಕ್ಷೇತ್ರದಲ್ಲೂ ಈಗ ಮಹಿಳೆಯರೇ ಮುಂದಿದ್ದಾರೆ. ಅಂತರಿಕ್ಷದಲ್ಲೂ ಪ್ರಯಾಣಿಸುತ್ತಾರೆ. ದೇಶದ ಆಡಳಿತವನ್ನೂ ನಿಭಾಯಿಸುತ್ತಾರೆ. ಹೆಣ್ಣು ಮಕ್ಕಳಿಂದ ಗಂಡು ಮಕ್ಕಳು ಸಾಕಷ್ಟು ಕಲಿಯುವುದು ಇದೆ. ಹೀಗಾಗಿ, ಪೋಷಕರು ಹೆಣ್ಣು ಮಕ್ಕಳಲ್ಲಿ ಧೈರ್ಯ ತುಂಬಿ, ಪ್ರೋತ್ಸಾಹ ನೀಡಬೇಕು. ಸಾಹಸ ಮನೋಭಾವದಲ್ಲಿ ಬೆಳಸಬೇಕು ಎಂದು ರೂಪಾ ಡಿ.ಮೌದ್ಗಿಲ್ ನುಡಿದರು.
ಬರಹಗಾರ್ತಿ ಅಂಜಲಿ ರಾಮಣ್ಣ ಮಾತನಾಡಿ, ಮಹಿಳಾ ಸಬಲೀಕರಣವು ಒಂದು ಸಾಧನೆ ಎಂದು ಹೇಳಲಾಗುತ್ತಿದೆ. ಆದರೆ, ಮಹಿಳೆಯು ಇನ್ನೊಂದು ಬದುಕನ್ನು ಬದಲಿಸಿದಾಗ ಮಾತ್ರ ನಿಜವಾದ ಸಬಲೀಕರಣವಾಗುತ್ತದೆ. ಇಂದು ಬಿಡುಗಡೆ ಯಾದ ಪುಸ್ತಕದಲ್ಲಿ ಲೇಖನ ಬರೆದಿರುವ ಲೇಖಕಿಯರುವ ನಿಜವಾಗಿಯೂ ಬದುಕನ್ನು ಪ್ರೀತಿಸುವ ಹಾಗೂ ಪ್ರೇರೇಪಿಸುವ ಬರಹವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ತ್ರೀವಾದಿ ಶ್ರೀಮತಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.







