ಹಂಸರಾಜ್ ಭಾರದ್ವಾಜ್, ಮಾತೆ ಮಾಣಿಕೇಶ್ವರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

ಬೆಂಗಳೂರು, ಮಾ. 9: ಇತ್ತೀಚೆಗೆ ನಿಧನರಾದ ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ಕಲಬುರ್ಗಿ ಜಿಲ್ಲೆ ಸೇಡಂನ ಮಾತೆ ಮಾಣಿಕೇಶ್ವರಿ ಅವರ ನಿಧನಕ್ಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು
ಸೋಮವಾರ ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಇಬ್ಬರು ಗಣ್ಯರ ನಿಧನದ ಸುದ್ದಿಯನ್ನು ವಿಧಾನಸಭೆ, ವಿಧಾನ ಪರಿಷತ್‌ಗೆ ತಿಳಿಸಿ, ವಿಷಾದ ವ್ಯಕ್ತಪಡಿಸಿದರು.
ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಅಗಲಿದ ಗಣ್ಯರ ಗುಣಗಾನ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಮಾತೆ ಮಾಣಿಕೇಶ್ವರಿ ಅವರು ಸೇಡಂನಲ್ಲಿ 1934ರ ಜುಲೈ 27ರಂದು ಜನಿಸಿದರು. ಸುಕ್ಷೇತ್ರ ಯಾನಾಗುಂದಿ ಮಾಣಿಕಗಿರಿಯನ್ನು ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರು ಎಂದು ಸ್ಮರಿಸಿದರು.
ಮಾತೆಯವರು ಗುಹೆಯೊಳಗೆ ವಾಸವಿದ್ದು, ಪ್ರತಿ ಶಿವರಾತ್ರಿಯಂದು ಗುಹೆಯಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಿದ್ದರು. ನಾನು ಮೂರು ಬಾರಿ ಅವರ ದರ್ಶನ ಪಡೆದಿದ್ದೇನೆ. ಮಾತೆಯವರ ಅಂತ್ಯಕ್ರಿಯೆಗೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಮಾರ್ಗದರ್ಶಕರು: ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಭಾರದ್ವಾಜ್ ತಮಗೆ ಮಾರ್ಗದರ್ಶಕರಾಗಿದ್ದರು. ನಾನು ವಿಪಕ್ಷ ನಾಯಕನಾಗಿದ್ದ ವೇಳೆ ಪದೇ-ಪದೇ ಅವರನ್ನು ಭೇಟಿ ಮಾಡುತ್ತಿದ್ದೆ. ಒಂದು ವೇಳೆ ನಾನು ಭೇಟಿ ಮಾಡುವುದು ವಿಳಂಬವಾಗಿದ್ದರೆ ಅವರೇ ಕರೆ ಮಾಡಿ ಕರೆಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.
ಮಾತೆ ಮಾಣಿಕೇಶ್ವರಿ ಅವರು ಅಹಿಂಸೆ, ಸರ್ವಧರ್ಮ ಸಹಿಷ್ಣುತೆ ಹೊಂದಿದ್ದರು. ಬಹುತ್ವದ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಬೋಧನೆ ಮಾಡುತ್ತಿದ್ದ ಅತ್ಯಂತ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.
ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಕಾಂಗ್ರೆಸ್‌ನ ಈಶ್ವರ್ ಖಂಡ್ರೆ, ಅಪಾರ ಭಕ್ತರನ್ನು ಹೊಂದಿದ್ದ ಮಾತೆ ಮಾಣಿಕೇಶ್ವರಿ ಅವರು ಕೋಟಿ ಲಿಂಗ ಸ್ಥಾಪನೆ ಕನಸು ಕಂಡಿದ್ದರು. ಆದರೆ, ಅದು ಅರ್ಧಕ್ಕೆ ನಿಂತಿದೆ. ಈಗ ರಾಜ್ಯ ಸರಕಾರ ಖುದ್ದಾಗಿ ಮುಂದೆ ನಿಂತು ಆ ಜವಾಬ್ದಾರಿಯನ್ನು ಪೂರ್ಣಗೊಳಿಸಬೇಕು. ಅಲ್ಲದೆ, ಮಾತೆಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಕೋರಿದರು.
ಆ ಬಳಿಕ ಉಭಯ ಸದನಗಳಲ್ಲಿ ಅಗಲಿದ ಗಣ್ಯರ ಸ್ಮರಣಾರ್ಥ ಎದ್ದುನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಲಾಯಿತು.
‘ಕರ್ನಾಟಕ, ತೆಲಂಗಾಣ, ಆಂಧ್ರ ಸೇರಿ ದೇಶದ ಮೂಲೆ ಮೂಲೆಗಳಲ್ಲಿ ಭಕ್ತರನ್ನು ಹೊಂದಿದ್ದ ಮಾತೆ ಮಾಣಿಕೇಶ್ವರಿ ಅವರ ಹೆಸರಿನಲ್ಲಿ ನೂರಾರು ಮಠಗಳು ಕಾರ್ಯ ನಿರ್ವಹಿಸುತ್ತಿವೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮಾತೆಯರು ಸರ್ವ ಧರ್ಮ ಸಹಿಷ್ಣುತೆಯನ್ನು ಕ್ರಿಯಾತ್ಮಕವಾಗಿ ಆಚರಿಸುತ್ತಾ ಆಧ್ಯಾತ್ಮಿಕತೆಗೆ ಹೊಸ ಭಾಷ್ಯ ಬರೆದಿದ್ದರು. ಅಲ್ಲದೆ, ನಡೆದಾಡುವ ದೇವರು ಎಂದು ಖ್ಯಾತರಾಗಿದ್ದರು’
-ಯಡಿಯೂರಪ್ಪ, ಮುಖ್ಯಮಂತ್ರಿ







