ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ, ಇಲಾಖೆಯಿಂದಲೇ ಕಟ್ಟಡದ ವಿನ್ಯಾಸ: ಸಚಿವ ಆರ್.ಅಶೋಕ್

ಬೆಂಗಳೂರು, ಮಾ. 9: ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದಲೇ ಕಟ್ಟಡದ ವಿನ್ಯಾಸ ಸಿದ್ದಪಡಿಸಿ, 10 ಕೋಟಿ ರೂ.ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯೆ ಕೆ. ಪೂರ್ಣಿಮಾ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಿನಿ ವಿಧಾನಸೌಧ ಕಂದಾಯ ಇಲಾಖೆಯಿಂದ ನಿರ್ಮಿಸಲಾಗುವುದಿಲ್ಲ, ನಾವು ಹಣ ನಿಗದಿ ಮಾಡುತ್ತೇವೆ. ಮಿನಿ ವಿಧಾನಸೌಧ ನಿರ್ಮಾಣ ಮೊತ್ತ ಹೆಚ್ಚಳವಾಗುತ್ತಿದ್ದು, ಅದನ್ನು ಸರಿಪಡಿಸಲಾಗುವುದು ಎಂದರು. ಹಿರಿಯೂರು ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಒಂದು ವಾರದೊಳಗೆ 10 ಎಕರೆ ಭೂಮಿ ಮಂಜೂರು ಹಾಗೂ 10 ಕೋಟಿ ರೂ.ಅನುದಾನ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ ಬಿಡುಗಡೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ ಮಾತನಾಡಿ, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒಂದೊಂದು ಕಡೆ ಒಂದೊಂದು ಮೊತ್ತವಾಗುತ್ತಿದೆ. ಹೀಗಾಗಿ ಇಲಾಖೆಯೆ 10 ಕೋಟಿ ರೂ.ಮೊತ್ತದೊಳಗೆ ಕಟ್ಟಡ, ಮೂಲಸೌಲಭ್ಯ ಕಲ್ಪಿಸಲು ಸೂಕ್ತ ವಿನ್ಯಾಸ ನೀಡಬೇಕು ಎಂದು ಕೋರಿದರು.
‘ಈ ಸಲಹೆ ಸರಿಯಾಗಿದೆ. ಈ ಬಗ್ಗೆ ಪರಿಶೀಲಿಸಿ 10 ಕೋಟಿ ರೂ.ಗಳ ಒಳಗೆ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಮತ್ತು ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸೂಕ್ತ ವಿನ್ಯಾಸ ಸಿದ್ದಪಡಿಸಿ ಲೋಕೋಪಯೋಗಿ ಇಲಾಖೆ ಅಥವಾ ಗೃಹ ನಿರ್ಮಾಣ ಮಂಡಳಿಗೆ ನೀಡಲಾಗುವುದು’ ಎಂದು ಸಚಿವ ಅಶೋಕ್ ವಿಧಾನಸಭೆಗೆ ತಿಳಿಸಿದರು.







