'ಯಡಿಯೂರಪ್ಪ ಇಲ್ಲದ ಬಿಜೆಪಿ' ಬಗ್ಗೆ ಆಡಳಿತ- ವಿಪಕ್ಷಗಳ ನಡುವೆ ವಾಕ್ಸಮರ

ಬೆಂಗಳೂರು, ಮಾ.9: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪವಿಲ್ಲದ ಬಿಜೆಪಿ ಶೂನ್ಯ ಎಂಬ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್‌ರ ಹೇಳಿಕೆಯು ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾದ ಘಟನೆ ವಿಧಾನಪರಿಷತ್‌ನಲ್ಲಿ ನಡೆಯಿತು.
ಸೋಮವಾರ ಪರಿಷತ್ತಿನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಎಸ್.ಆರ್.ಪಾಟೀಲ್, ಕೃಷ್ಣಾ ಮೇಲ್ದಂಡೆ ಯೋಜನೆಯ ಅನುದಾನದ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷಗಳಿಗಿಂತ ಅಕ್ಕಪಕ್ಕದಲ್ಲಿರುವವರೇ ಹೆಚ್ಚು ಅಪಾಯಕಾರಿ ಎಂದು ಹೇಳಿದರು. ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಶೂನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ತೇಜಸ್ವಿನಿ ಗೌಡ ಹಾಗೂ ವೈ.ಎ.ನಾರಾಯಣಸ್ವಾಮಿ, ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಶೂನ್ಯ ಎಂಬುದನ್ನು ನೀವು ಒಪ್ಪಿಕೊಳ್ಳುವಿರಾ ಎಂದು ಪ್ರಶ್ನಿಸಿದರು. ಅಲ್ಲದೆ, ಯಡಿಯೂರಪ್ಪ ನಮ್ಮ ಪಕ್ಷದ ದೈತ್ಯ ಶಕ್ತಿ ಎಂದು ಸಮರ್ಥಿಸಿಕೊಂಡರಾದರೂ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ, ಯಡಿಯೂರಪ್ಪ ಇಲ್ಲದೇ ಬಿಜೆಪಿಯಿಲ್ಲ ಎಂಬುದನ್ನು ನೀವು ಒಪ್ಪುವಿರಾ ಎಂದು ಪ್ರಶ್ನಿಸಿದರು.
ಈ ನಡುವೆ ಬಿಜೆಪಿಯ ಪ್ರಾಣೇಶ್, ರವಿಕುಮಾರ್, ಹನುಮಂತ ನಿರಾಣಿ ಸೇರಿದಂತೆ ಹಲವರು ತೇಜಸ್ವಿನಿಯ ಬೆಂಬಲಕ್ಕೆ ನಿಂತರು. ಈ ನಡುವೆ ಮಧ್ಯಪ್ರವೇಶಿಸಿದ ಜೆಡಿಎಸ್‌ನ ಬೋಜೇಗೌಡ ನೋ ಯಡಿಯೂರಪ್ಪ, ನೋ ಬಿಜೆಪಿ ಎಂಬುದನ್ನು ಒಪ್ಪುವಿರಾ ಅಥವಾ ಇಲ್ಲವಾ ಅಷ್ಟೇಳಿ ಎಂದು ಪ್ರಶ್ನಿಸಿದರು. ಆಗ ಬಿಜೆಪಿಯ ಪ್ರಾಣೇಶ್ ಎದ್ದು ನಿಂತು, ಬೋಜೇಗೌಡರು ಜೆಡಿಎಸ್‌ನವರಾ ಅಥವಾ ಕಾಂಗ್ರೆಸ್‌ನವರಾ ಎಂದು ಕುಟುಕಿದರು.
ಇದಕ್ಕೆ ಉತ್ತರಿಸಿದ ತೇಜಸ್ವಿನಿ ಗೌಡ ಯಡಿಯೂರಪ್ಪ ಬಿಜೆಪಿಯ ಶಕ್ತಿ ಎನ್ನುತ್ತಿದ್ದಂತೆಯೇ ವಿಪಕ್ಷ ಸದಸ್ಯರಾದ ಐವನ್ ಡಿಸೋಜ, ಶ್ರೀಕಂಠೇಗೌಡ ಸೇರಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ಮಧ್ಯಪ್ರವೇಶಿಸಿದ ಬೋಜೇಗೌಡ, ನಾವು ಯಡಿಯೂರಪ್ಪರನ್ನು ತೆಗಳುತ್ತಿಲ್ಲ, ಹೊಗಳುತ್ತಿದ್ದೇವೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೆಹರ್ ಸಿಂಗ್ ಅವರು, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಎಲ್ಲರೂ ಹೀರೋಗಳೇ. ಆದರೆ, ಕಾಂಗ್ರೆಸ್ ಮಾತ್ರ ಝೀರೋ ಆಗಿದೆ ಎಂದಾಗ, ಆಡಳಿತ ಪಕ್ಷದ ಹಲವರು ಇದಕ್ಕೆ ಧ್ವನಿಗೂಡಿಸಿದರು. ಈ ವೇಳೆ ಕಾಂಗ್ರೆಸ್‌ನ ಯೋಗಿ ವೆಂಕಟೇಶ್ ಮಾತನಾಡಿ, ನಿಮ್ಮದು ಅಲ್ಪಾಯುಷಿ ಸರಕಾರ. ಎಲ್ಲವನ್ನೂ ಬೇಗ ಅನುಭವಿಸಿ ಬಿಡಿ ಎಂದು ಹೇಳಿದರು.
.jpg)







